ಕುಂದಾಪುರ: ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಚಟುವಟಿಕೆ ಹಾಗೂ ವಸ್ತುಗಳ ಮೂಲಕ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸವನ್ನು ಮಾಂಟೆಸರಿ ಶಿಕ್ಷಣ ಮಾಡುತ್ತದೆ. ಮಕ್ಕಳಿಗೆ ನಾವು ಏನು ಕಲಿಸುತ್ತೆವೆ ಎನ್ನುವುದಕ್ಕಿಂತ ಅವರು ಏನನ್ನು ಕಲಿಯಲು ಉತ್ಸುಕರಾಗಿರುತ್ತಾರೆ ಎಂದು ತಿಳಿದು ಅದಕ್ಕೆ ತಕ್ಕಂತೆ ಸ್ಪಂದಿಸುವುದು ಮುಖ್ಯ ಎಂದು ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಸುನೀಲ್ ಸಿ ಮುಂದ್ಕೂರು ಹೇಳಿದರು.
ಅವರು ಇಲ್ಲಿನ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ನಾಲೆಜ್ಡ್ ಕ್ಯಾಂಪಸ್ ನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ಹಿಸ್ ಗ್ರೇಸ್ ಮಾಂಟೆಸೊರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಇಂದು ಮಕ್ಕಳಿಗೆ ಹೇಗೆ ಬದುಕಬೇಕು ಎಂದು ಹೇಳುವ ಬದಲು, ಕಂಪ್ಯೂಟರ್, ಆ್ಯಪ್ ಮುಂತಾದ ಉಪಕರಣಗಳನ್ನು ಹೇಗೆ ಬಳಸಬೇಕು ಎಂದು ಹೇಳಿಕೊಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಪರಪ್ಪರ ಮಾತನಾಡದೇ ಇರುವ ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಸಯ್ಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕ ಮಾತನಾಡಿ, ಕಳೆದ ನೂರು ವರ್ಷಗಳಿಂದಲೂ ಒಂದಿಷ್ಟೂ ಬದಲಾವಣೆಯನ್ನು ಕಾಣದೆ ಮಾಂಟೆಸರಿ ಶಿಕ್ಷಣ ನಡೆದು ಬಂದಿದೆ. ಇದು ನಿರಂತರವಾಗಿ ಮುಂದುವರಿಯುತ್ತಿರಬೇಕು. ಮಕ್ಕಳಿಗೆ 3ರಿಂದ 6 ವರ್ಷಗಳ ಅವಧಿಯಲ್ಲಿ ಕಲಿಸುವ ವಿಚಾರಗಳು ಅವರ ವಿಶೇಷ ಪ್ರಭಾವ ಬೀರುತ್ತದೆ ಎಂದರು.
ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ ನ ಅಧ್ಯಕ್ಷ ಹಾಜಿ ಮಾಸ್ತರ್ ಮಹಮ್ಮದ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ಚೈತನ್ಯ ಸ್ಕೂಲ್ ನ ಅಧ್ಯಕ್ಷೆ ಶೋಭಾ ಸೋನ್ಸ್, ಮಂಗಳೂರು ಹಿಸ್ ಗ್ರೇಸ್ ಅಕಾಡೆಮಿ ಆಫ್ ಮಾಟೆಸೊರಿಯ ನಿರ್ದೇಶಕ ಜೆಸಿಂತಾ ವಿನ್ಸೆಂಟ್, ಹಿಸ್ ಗ್ರೆಸ್ ಮಾಂಟೆಸೊರಿಯ ಮುಖ್ಯಸ್ಥೆ ಸಲ್ಮಾ ತರನಮ್, ಮಂಗಳೂರು ಬ್ಯಾರೀಸ್ ಪಬ್ಲಿಕ್ ಸ್ಕೂಲ್ ನ ಗೀತಾ ರೇಗೋ ಉಪಸ್ಥಿತರಿದ್ದರು
ಸೀ ಸೈಡ್ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಫೀರ್ದೋಸ್ ಸ್ವಾಗತಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಶೇಖರ ದೋಮ ಧನ್ಯವಾದಗೈದರು. ಜನಿಫರ್ ಕಾರ್ಯಕ್ರಮ ನಿರೂಪಿಸಿದರು.