ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಗಾಂಧಿನಗರದಲ್ಲಿ ಹೋಟೆಲ್ ನಡೆಸುತ್ತಿದ್ದ ಕುಂದಾಪುರ ಮೂಲದ ಉದ್ಯಮಿ ನೆಹರು ನಗರದ ನಿವಾಸಿ ಸಂತೋಷ್ ಶೆಟ್ಟಿ (54) ಎಂಬುವವರನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಬರ್ಬರವಾಗಿ ಹತ್ಯೆಗೈದ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆತನ ಪತ್ನಿ ಅನ್ನಪೂರ್ಣ ಹಾಗೂ ಪ್ರಕಾಶ್ ಎಂಬಾತನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅನೈತಿಕ ಸಂಬಂಧವೇ ಮುಳುವಾಯಿತು:
ಮೃತ ಸಂತೋಷ ಶೆಟ್ಟಿ ಎಂಬುವವರ ಪತ್ನಿ ಅನ್ನಪೂರ್ಣ, ವಕೀಲ ಕುಂದಾಪುರದ ಪ್ರಕಾಶ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಆಸ್ತಿ ಹಂಚಿಕೆ ವಿಚಾರ ಹಾಗೂ ಅನೈತಿಕ ಸಂಬಂಧಕ್ಕೆ ಸಂತೋಷ್ ಅಡ್ಡಿಯಾಗಿದ್ದ ವಿಚಾರಕ್ಕೆ ಇಬ್ಬರೂ ಪೂರ್ವ ನಿರ್ಧಾರದಂತೆ ಯೋಜನೆ ರೂಪಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನೆಹರೂ ನಗರದಲ್ಲಿರುವ ಆತನ ಮನೆಯಲ್ಲಿಯೇ ಪತ್ನಿ ಹಾಗೂ ಪ್ರಕಾಶ್ ಸೇರಿ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಹೀಗಾಗಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶೇಷಾದ್ರಿಪುರಂ ಪೊಲೀಸರು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ರಾತ್ರಿ ವೇಳೆ ಕುಡಿದಿದ್ದ ಸಂತೋಷ್ ಶೆಟ್ಟಿಯೊಂದಿಗೆ ಜಗಳವಾಡಿದ್ದ ಅನ್ನಪೂರ್ಣ ಗಂಡನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ರೂಮಿನಲ್ಲಿ ಕೂಡಿಹಾಕಿದ್ದಳು. ಶುಕ್ರವಾರ ಬೆಳಗ್ಗೆ ಮಕ್ಕಳು ಮನೆಯಲ್ಲಿ ಇರಲಿಲ್ಲ. ಈ ವೇಳೆ ದಂಪತಿ ನಡುವೆ ಜಗಳ ನಡೆದಿದ್ದು, ಕೂಡಲೇ ಅನ್ನಪೂರ್ಣ ತನ್ನ ಪ್ರಿಯಕರ ಪ್ರಕಾಶ್‌ನನ್ನು ಕರೆಸಿಕೊಂಡಿದ್ದಾಳೆ. ಬಳಿಕೆ ಮನೆಯ ಒಳಗೇ ಸಂತೋಷ್‌ರ ಬಾಯಿ ಮುಚ್ಚಿ, ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ.
ದೊಣ್ಣೆ ಏಟಿನಿಂದ ತೀವ್ರ ಅಸ್ವಸ್ಥಗೊಂಡ ಸಂತೋಷ್‌ರನ್ನು ಪತ್ನಿಯೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾಳೆ. ಆದರೆ ಸಂತೋಷ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆದರೂ, ಆರೋಪಿತ ಮಹಿಳೆ ಮತ್ತೆ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾಳೆ. ಸಂತೋಷ್ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ದಂಪತಿಯ ಮಗ ಇಂಜಿನಿಯರ್ ಆಗಿದ್ದು, ಮಗಳು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಸಂತೋಷ್ ಗಾಂಧಿನಗರದಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದು, ಆರ್ಥಿಕವಾಗಿ ಸಬಲರಾಗಿದ್ದರು.
ಆರೋಪಿ ಪ್ರಕಾಶ್ ಎಲ್‌ಎಲ್‌ಬಿ ಪದವೀಧರನಾಗಿದ್ದು, ಬಾರ್ ಕೌನ್ಸಿಲ್‌ನಲ್ಲಿ ಇತ್ತೀಚೆಗೆ ಸದಸ್ಯತ್ವ ನೋಂದಣಿ ಮಾಡಿಸಿದ್ದ. ಕೊಲೆಯಾದ ಸಂತೋಷ್ ಶೆಟ್ಟಿ ಕುಟುಂಬಕ್ಕೆ ಮೊದಲಿನಿಂದಲೂ ಪರಿಚಯವಿದ್ದ. ಸಂತೋಷ್ ಹಾಗೂ ಅನ್ನಪೂರ್ಣ ನಡುವೆ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪದೇ ಪದೇ ಜಗಳ ನಡೆಯುತ್ತಿತ್ತು. ಪ್ರಕಾಶ್ ಹಾಗೂ ಅನ್ನಪೂರ್ಣ ನಡುವಿನ ಸಲುಗೆಯ ಬಗ್ಗೆ ಸಂತೋಷ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/