ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗುರುವಾರ ಬೆಳಗಿನ ಜಾವ ನಾಗೂರಿನಲ್ಲಿ ನಡೆದ ಅಪಘಾತದಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೇದೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶಿರೂರು ಕರಾವಳಿಯ ನಾಣು ಬಿಲ್ಲವ ಅವರ ಪುತ್ರ ನಾಗೇಶ್ ಬಿಲ್ಲವ (34) ಮೃತ ದುರ್ದೈವಿ.
ಬೈಂದೂರು ಪೊಲೀಸ್ ಠಾಣೆಯಲ್ಲಿಯಲ್ಲಿ ಗುಪ್ತ ಮಾಹಿತಿ ಸಿಬ್ಬಂಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ರಾತ್ರಿ ಪಾಳಿಯ ಗಸ್ತಿನಲ್ಲಿದ್ದರು. ರಸ್ತೆಯಲ್ಲಿ ಯಾವುದೇ ಸೂಚನೆಗಳಿಲ್ಲದೇ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ನಾಗೇಶ್ ಅವರ ಎದೆಯ ಭಾಗಕ್ಕೆ ತೀವ್ರ ಹೊಡೆದ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ.
ನಾಗೇಶ್ ಅವರು ಈ ಹಿಂದೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದು, ವರ್ಷದ ಹಿಂದಷ್ಟೆ ಬೈಂದೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರಿಗೆ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಮೃತರು ಹೆಂಡತಿ, ತಂದೆ ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.