ದಿವ್ಯಾಧರ ಶೆಟ್ಟಿ ಕೆರಾಡಿ | ಕುಂದಾಪ್ರ ಡಾಟ್ ಕಾಂ ಲೇಖನ.
ಕನ್ನಡ ಚಿತ್ರರಂಗದ ಯುವಪೀಳಿಗೆಯ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಂತಿರುವ ಹೆಸರು ರಿಷಬ್ ಶೆಟ್ಟಿ. ಚಿತ್ರದಿಂದ ಚಿತ್ರಕ್ಕೆ ಹೊಸ ಪ್ರಯೋಗ, ವಿಭಿನ್ನ ಪ್ರಯತ್ನಗಳ ಮೂಲಕ ಚಿತ್ರ ರಸಿಕರ ನಾಡಿಮಿಡಿತ ಅರಿತು ಅವರನ್ನು ರಂಜಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಕಿರಿಕ್ ಪಾರ್ಟಿಯಂತಹ ಭರ್ಜರಿ ಹಿಟ್ ಸಿನೆಮಾವನ್ನು ಕೊಟ್ಟವರು. ಸದಾ ಹೊಸತನ ಭಿನ್ನ ಪ್ರಯೋಗಗಳತ್ತ ಮನಮಾಡುವ ಅವರು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಉದ್ದದ ಶೀರ್ಷಿಕೆಯ ಮಕ್ಕಳ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಮೂಲಕ ಒಂದು ಹೊಸ ಕ್ರಾಂತಿಗೆ ಆರಂಭ ಹಾಡಿದವರು ಅನಂತನಾಗ್ ಒಬ್ಬರು ಬಿಟ್ಟು ಸ್ಟಾರ್ ನಟರ, ಹೀರೋಯಿಸಂನ ಹಿಂದೆ ಬೀಳದೆ ಸ್ಥಳೀಯ ಪ್ರತಿಭೆಗಳನ್ನಿಟ್ಟುಕೊಂಡು ಅದೂ ಕರ್ನಾಟಕ ಗಡಿನಾಡಿನ ಶಾಲೆಯ ಹಿನ್ನೆಲೆಯನ್ನಿಟ್ಟುಕೊಂಡು ಒಂದು ಸಂದೇಶ ಮುಟ್ಟಿಸುವ ಮೂಲಕ ಕನ್ನಡ ಜನ ಕನ್ನಡ ಶಾಲೆಗಳತ್ತ ನೋಡುವಂತೆ, ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಮಾತನಾಡುವಂತೆ ಮಾಡಿದವರು.
ರಿಷಬ್ ಯಾವತ್ತೂ ಪ್ರಚಾರದ ಹಪಿಹಪಿಗೆ ಬೀಳದ, ಗೆಲುವಿನ ಅಮಲೇರಿಸಿಕೊಳ್ಳದ ಸಾದಾ ಸೀದ ವ್ಯಕ್ತಿ. ಹುಟ್ಟೂರಿನ ಹುಡುಗರ ಜೊತೆ ಇಂದಿಗೂ ಅದೇ ಒಡನಾಟ ಇಟ್ಟುಕೊಂಡಿರುವ ಗೆಳೆಯರ ಮೆಚ್ಚಿನ ಪ್ರಶಾಂತ್ ಶೆಟ್ಟಿ.
ರಿಷಬ್ ಆಕಸ್ಮಿಕವಾಗಿ ನಟನಾಗಿದ್ದಲ್ಲ ಚಿತ್ರರಂಗಕ್ಕೆ ನಟನಾಗುವ ಹಂಬಲದಿಂದಲೇ ಎಂಟ್ರಿಕೊಟ್ಟವರು. ನಿರ್ದೇಶಕನಾಗುವ ಮುಂಚೆನೇ ತುಗ್ಲಕ್‌ನಲ್ಲಿ ರಕ್ಷಿತ್ ಜೊತೆ ವಿಲನ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದವರು. ನಂತರ ಉಳಿದವರು ಕಂಡಂತೆಯ ರಘು ಪಾತ್ರ ಅವರಲ್ಲಿ ಒಬ್ಬ ಸಮರ್ಥ ನಟನಿದ್ದಾನೆ ಎನ್ನುವುದು ತೋರಿಸಿಕೊಟ್ಟಿತ್ತು. ನಂತರ ನಟನೆಯಿಂದ ನಿರ್ದೇಶಕನ ಸ್ಥಾನಕ್ಕೆ ಬಡ್ತಿ ಪಡೆದ ರಿಷಬ್‌ಗೆ ಒಂದು ವಿಶೇಷ ಗುಣ ಇದೆ ಯಾವುದನ್ನಾದರೂ ಕಾಟಾಚಾರಕ್ಕೆ ಮಾಡುವ, ಪ್ರಯೋಗ ಮಾಡುವ ಸಾಹಸ ಮಾಡುವುದಿಲ್ಲ. ಪ್ರತಿ ಕೆಲಸದಲ್ಲೂ ತನಗೆ ತೃಪ್ತಿ ಆದರೆ ಮಾತ್ರ ಮಾಡುವ ಅದನ್ನು ಒಪ್ಪಿಕೊಳ್ಳುವ ಗುಣ ಅವರನ್ನು ಕನ್ನಡ ಚಿತ್ರರಂಗದಲ್ಲಿ ಇಲ್ಲಿಗೆ ತಂದು ನಿಲ್ಲಿಸಿದೆ.
ರಿಷಬ್ ಹೀರೋ ಆಗ್ತಾರೆ ಅಂದಾಗ ನಮಗೆಲ್ಲಾ ಆಶ್ಚರ್ಯಕ್ಕಿಂತ ಖುಷಿ ಆಗಿದ್ದೆ ಹೆಚ್ಚು. ಯಾಕೆಂದರೆ ಒಬ್ಬ ಹೀರೋಗಿರುವ ಎಲ್ಲ ಲಕ್ಷಣಗಳು ರಿಷಬ್‌ಗೆ ಇದೆ ಕಾಮಿಡಿಯಿಂದ ಹಿಡಿದು ಯಾವ ಪಾತ್ರವನ್ನಾದರೂ ಮಾಡಬಲ್ಲವರು ಕಾಲೇಜು ಜೀವನದಲ್ಲಿ ಹಲವು ನಾಟಕ, ಪ್ರಹಸನಗಳಲ್ಲಿ ಬಣ್ಣಹಚ್ಚಿದ, ಹಲವು ನಿರ್ದೇಶಕರ ಜೊತೆ ಪಳಗಿದ ಅನುಭವ ಇದೆ. ಇನ್ನೊಂದು ವಿಶೇಷ ಅಂದರೆ ರಿಷಬ್ ಜುಡೋ ಮತ್ತು ಕುಸ್ತಿಯಲ್ಲಿ ಕಾಲೇಜಿನಲ್ಲಿ ಮೆಡಲ್‌ಗಳನ್ನು ಬಾಚಿದವರು. ಸಿನೆಮಾದಲ್ಲಿ ಫೈಟ್ ಮಾಸ್ಟರ್ ಆಗಿಯೂ ಅನುಭವ ಇದೆ. ಬಹುಶಃ ಇದನ್ನೆಲ್ಲ ನೋಡಿದ ಮೇಲೆನೇ ಜಯತೀರ್ಥ ತಮ್ಮ ಕತೆಗೆ ರಿಷಬ್ ಜೀವತುಂಬಬಲ್ಲರೆಂದು ಇವರನ್ನು ಆಯ್ಕೆಮಾಡಿರಬಹುದು.
ಬೆಲ್ ಬಾಟಂ 80ರ ದಶಕದ ಡಿಟೆಕ್ಟಿವ್ ಸಿನೆಮಾ ಬಹುಶಃ ಕನ್ನಡದಲ್ಲಿ ಈ ತರದ ಸಿನೆಮಾಗಳು ಬಂದು ಹಲವು ವರ್ಷ ಕಳೆದಿದೆ. ಪೋಲಿಸ್ ಸ್ಟೇಷನ್‌ನಲ್ಲಿ ನಡೆಯುವ ಕಳ್ಳತನವನ್ನು ಭೇದಿಸುವ ಡಿಟೆಕ್ಟಿವ್ ದಿವಾಕರನಾಗಿ ತೆರೆಯ ಮೇಲೆ ಪೆದ್ದು ಪೆದ್ದಾಗಿ ಹರಿಪ್ರಿಯಾ ಜೊತೆ ಮುದ್ದು ಮುದ್ದಾಗಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್. ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡು ಈಗಾಗಲೇ ಕನ್ನಡ ಜನ ಚಪ್ಪರಿಸಿಕೊಂಡು ಸವಿಯುತ್ತಿದ್ದಾರೆ. ಟ್ರೈಲರ್ ಮತ್ತು ಟೀಸರ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಕುತೂಹಲ ಕೆರಳಿಸಿರುವ ಈ ಸಿನಿಮಾ ಹಲವು ಕಾರಣಗಳಿಗಾಗಿ ಚಿತ್ರರಸಿಕರ ನಿದ್ದೆಕೆಡಿಸಿದೆ. ರಿಷಬ್ ಪೂರ್ಣಪ್ರಮಾಣದ ನಾಯಕನಾಗಿ ತೆರೆಯಮೇಲೆ ಕಾಣಿಸಿಕೊಳ್ಳುವ ಮೊದಲ ಚಿತ್ರ ಇದು ಜೊತೆಗೆ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ಶಿವಮಣಿಯವರು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಸಹಜ ಅಭಿನಯದ ಅಚ್ಯುತ್ ದಿವಾಕರನ ತಂದೆಯ ಪಾತ್ರದಲ್ಲಿ ಮತ್ತು ಖಡಕ್ ಧ್ವನಿಯ ಭರವಸೆಯ ನಟ ರಿಷಬ್ ಒಡನಾಡಿ ಪ್ರಮೋದ್ ಶೆಟ್ಟಿ ಪೋಲಿಸ್ ಗೆಟಪ್‌ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ.
ಕನ್ನಡದ ಹೆಸರಾಂತ ಕತೆಗಾರ ಟಿ. ಕೆ ದಯಾನಂದರವರ ಈ ಪತ್ತೆದಾರಿ ಕತೆಗೆ ಜೀವತುಂಬಿರುವ ನಿರ್ದೇಶಕ ಜಯತೀರ್ಥ, ಈ ಚಿತ್ರ 2019ರ ಯಶಸ್ವಿ ಮನೋರಂಜನೆಯ ಚಿತ್ರ ವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ತಮಿಳು ರೈಟ್ಸ ಕೂಡಾ ಮಾರಾಟವಾಗಿದ್ದು ಚಿತ್ರ ಬಿಡುಗಡೆಗೂ ಮುಂಚೆನೆ ಬಾರಿ ಸದ್ದುಮಾಡುತ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಡಿಟೆಕ್ಟಿವ್ ದಿವಾಕರ ತೆರೆಯ ಮೇಲೆ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ ನಿಮ್ಮ ಎಂದಿನ ಪ್ರೋತ್ಸಾಹ ಬೆಲ್ ಬಾಟಂ ಮೇಲೆ ಕೂಡಾ ಇರಲಿ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲುಗಲ್ಲಾಗಲಿ.
Videos