ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ನಡೆಯುತ್ತಿರುವ ತಿಂಗಳ ಕಾರ್ಯಕ್ರಮದ ಅಂಗವಾಗಿ ಜೂನ್ 14ರಂದು ಸಂಜೆ 4:30ಕ್ಕೆ ಉಪ್ಪಿನಕುದ್ರುವಿನ ಅಕಾಡೆಮಿ ಸಭಾಂಗಣದಲ್ಲಿ ಯಕ್ಷಗಾನ ಗಾನ ವೈಭವ ನಡೆಯಲಿದೆ.
ಈ ಸಂದರ್ಭದಲ್ಲಿ ತಲ್ಲೂರಿನ ಖ್ಯಾತ ವೈದ್ಯ ಡಾ. ಎಂ.ವಿ. ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಉಪ್ಪಿನಕುದ್ರು ದಿ. ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಯು.ಸೂರ್ಯನಾರಾಯಣ ಮಯ್ಯ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಹೆಸರಾಂತ ಬಡಗುತ್ತಿಟ್ಟಿನ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ ಮತ್ತು ಪರಮ ನಾಯಕ್ ಅವರ ದ್ವಂದ್ವ ಸ್ವರದಲ್ಲಿ ಯಕ್ಷಗಾನ ಗಾನ ವೈಭವ ನಡೆಯಲಿದೆ ಎಂದು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ತಿಳಿಸಿದ್ದಾರೆ.