ಶ್ರೀನಗರ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ ಬಳಿಕ ಸೈನಿಕರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿಯನ್ನು ಯೋಧರು ಇಂದು ಹತ್ಯೆ ಮಾಡಿದ್ದಾರೆ. ಅಬ್ದುಲ್ ರಶೀದ್ ಜೊತೆ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕರಮ್ ನನ್ನು ಸಹ ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪುಲ್ವಾಮಾ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ಯೋಧರ ಹಾಗೂ ಉಗ್ರರ ನಡುವೆ ಅಹೋರಾತ್ರಿ ಭೀಕರ ಕಾಳಗ ನಡೆಯುತ್ತಿತ್ತು. 40 ಯೋಧರ ಬಲಿ ಪಡೆದ ಆದಿಲ್ ದಾರ್ ಗೆ ನೆರವು ನೀಡಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈನಿಕರು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದಾಗ ಉಗ್ರರು ಪ್ರತಿ ದಾಳಿ ನಡೆಸಿದ್ದರು. ಈ ವೇಳೆ ಓರ್ವ ನಾಗರಿಕ ಸಹಿತ ನಾಲ್ವರು ಯೋಧರು ಇಂದು ಕೂಡ ಹುತಾತ್ಮರಾಗಿದ್ದಾರೆ.
ಬಳಿಕ ಭರ್ಜರಿ ಕಾರ್ಯಾಚರಣೆ ನಡೆಸಿದ ಯೋಧರು, 40 ಯೋಧರ ಬಲಿ ಪಡೆದ ಮಾಸ್ಟರ್ ಮೈಂಡ್ ಆದ ಅಬ್ದುಲ್ ರಶೀದ್ ಹಾಗೂ ಕರಮ್‍ನನ್ನು ಇದೀಗ ಹತ್ಯೆ ಮಾಡಿದ್ದಾರೆ. ಇನ್ನೂ 6 ಜನ ಉಗ್ರರು ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಯೋಧರು ಪಿಂಗ್ಲಾನ್‍ನ ಪ್ರತಿ ಮನೆಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
#JammuAndKashmir : Two terrorists have been killed during encounter between terrorists and security forces, in Pinglan area of Pulwama district. Operation still in progress.
— ANI (@ANI) February 18, 2019
ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದ್ದು ಹೇಗೆ?
ಆತ್ಮಾಹುತಿ ದಾಳಿ ನಡೆದ ಆವಂತಿಪೂರದಿಂದ ಕೇವಲ 10 ಕಿ.ಮೀ ದೂರದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸೇನೆಗೆ ಸಿಕ್ಕಿದೆ. ಬಳಿಕ ಮಧ್ಯರಾತ್ರಿ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಆ ಕಟ್ಟಡವನ್ನು ಸೇನೆ ಸುತ್ತುವರಿದಿತ್ತು. 55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್ ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆ ನಡೆಸಿ ಮೊದಲು ಉಗ್ರರಿಗೆ ಶರಣಾಗಲು ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಯೋಧರಿಗೆ ಗುಂಡಿನ ದಾಳಿ ನಡೆಸಿದ್ದರು. ಇಂದು ಬೆಳಗ್ಗಿನ ಜಾವದವರೆಗೂ ನಿರಂತರವಾಗಿ ಭೀಕರ ಗುಂಡಿನ ಚಕಮಕಿ ನಡೆದಿದೆ. ಆಗ ಗುಂಡಿನ ಚಕಮಕಿ ವೇಳೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಆದರೂ ಎದೆಗುಂದದೆ ಯೋಧರು ಕಾರ್ಯಾಚರಣೆ ಮುಂದುವರಿಸಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿದ್ದ ಇಡೀ ಕಟ್ಟಡವನ್ನೇ ಉಡಾಯಿಸಿದ್ದಾರೆ.