ಕುಂದಾಪುರ: ತನಗೆ ಹಣ ನೀಡಲಿಲ್ಲವೆಂದು ಸಿಟ್ಟುಕೊಂಡ ಅಳಿಯ ವೃದ್ಧ ಅತ್ತೆಯನ್ನೇ ಹೊಡೆದು ಕೊಂದ ಘಟನೆ ತಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪಿನಕುದ್ರುವಿನಲ್ಲಿ ನಡೆದಿದೆ.
ಉಪ್ಪಿನಕುದ್ರು ರಾಮಮಂದಿರದ ಬಳಿಯ ಅಂಗಡಿಮನೆ ದಿ| ರಾಮಕೃಷ್ಣ ಶೇರೆಗಾರ್ ಅವರ ಪತ್ನಿ ಜಾನಕಿ(80) ಮೃತ ಮಹಿಳೆ. ಆಕೆಯ ಪುತ್ರಿಯ ಗಂಡ ಬೈಂದೂರಿನ ಮಯ್ಯಾಡಿ ನಿವಾಸಿ ಜನಾರ್ದನ ಶೇರೆಗಾರ್ (45) ಕೊಲೆ ಮಾಡಿದ ಆರೋಪಿ.
ಜನಾರ್ದನ ಶೇರೆಗಾರ್ ಬೆಂಗಳೂರಿನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪತ್ನಿಯ ಮೃತಪಟ್ಟ ಬಳಿಕ ಪುತ್ರನೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದ. ಆ ನಂತರ ಆತ ಪತ್ನಿಯ ಮನೆಗೆ ಬಂದಿರಲಿಲ್ಲ.
ಒಂದು ವಾರದ ಹಿಂದೆ ಬೆಂಗಳೂರಿನಿಂದ ಮಯ್ಯಾಡಿಗೆ ಬಂದಿದ್ದ ಜನಾರ್ದನ ತನ್ನ ಸೋದರಳಿಯನ ಮದುವೆಯ ಕಾರಣವೊಡ್ಡಿ ಉಪ್ಪಿನಕುದ್ರುವಿನಲ್ಲಿಯೇ ನಿಂತಿದ್ದ ಎನ್ನಲಾಗಿದೆ. ಕಳೆದ ಒಂದು ವಾರದಿಂದ ಅತ್ತೆಯನ್ನು ಅಳಿಯ ಜನಾರ್ದನ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಆದರೆ ಅತ್ತೆ ಹಣ ನೀಡಿರಲಿಲ್ಲ. ಮಂಗಳವಾರ ರಾತ್ರಿ ಹಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದ್ದು ಜಗಳ ಮುಂದುವರಿದಾಗ ಅತ್ತೆಯ ಊರುಗೋಲಿನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅವರು ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ.
ಈ ಪ್ರದೇಶದಲ್ಲಿ ಮನೆಗಳು ಬಹಳಷ್ಟು ದೂರವಿದ್ದು, ಜೋರಾಗಿ ಬೊಬ್ಬೆ ಹಾಕುತ್ತಿರುವ ಶಬ್ದ ಕೇಳಿದ ಮಹಿಳೆಯೊಬ್ಬರು ವೃದ್ಧೆಯ ಎರಡನೇ ಮಗ ಗಣೇಶನಿಗೆ ಸುದ್ಧಿ ಮುಟ್ಟಿಸಿದರು. ಆದರೆ ಮಗ ಬರುವಷ್ಟರಲ್ಲಿ ವೃದ್ಧೆ ಮೃತಪಟ್ಟಿದ್ದರು.
ಬುಧವಾರ ಗಣೇಶ್ ಅವರ ಅಣ್ಣನ ಮಗಳ ವಿವಾಹ ಉಪ್ಪಿನಕುದ್ರು ರಾಮಮಂದಿರದ ಸಭಾಭವನದಲ್ಲಿ ನಡೆಯ ಬೇಕಾಗಿದ್ದು, ಈ ಕೊಲೆಯಿಂದಾಗಿ ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು.
ಅತ್ತೆಯ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಿದ ಆರೋಪಿ ಜನಾರ್ದನ ತನಗೆ ಏನೂ ತಿಳಿಯದವನಂತೆ ಮನೆಯೊಳಗೆ ಹೋಗಿ ನಿದ್ದೆ ಮಾಡಿದ್ದಾನೆ. ಸ್ಥಳಕ್ಕಾಗಮಿಸಿದ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ, ಡಿವೈಎಸ್‌ಪಿ ಎಂ. ಮಂಜುನಾಥ ಶೆಟ್ಟಿ, ಉಪನಿರೀಕ್ಷಕ ದೇವೇಂದ್ರ ಹಾಗೂ ಸಿಬಂದಿ ಮನೆಯ ಬಾಗಿಲನ್ನು ಒಡೆಯಿಸಿ ಆರೋಪಿಯನ್ನು ಬಂಧಿಧಿಸಿದ್ದಾರೆ.
ಬುಧವಾರ ಸಂಜೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿ ಅಣ್ಣಾಮಲೈ ಸ್ಥಳ ಪರಿಶೀಲನೆ ನಡೆಸಿ ಮೃತರ ಸಂಬಂಧಿಧಿಕರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, ಬಡ ಮಹಿಳೆಯ ಕುಟುಂಬಿಕರು ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್‌ನ್ನು ಹೊಂದಿದ್ದರೆ ಸರಕಾರದಿಂದ ದೊರಕುವ ಪರಿಹಾರ ದೊರೆಕಿಸಲು ಪೊಲೀಸ್ ಇಲಾಖೆಯಿಂದ ಸಹಕಾರ ನೀಡುವ ಕುರಿತು ಹಾಗೂ ಕೊಲೆ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವ ಕುರಿತು ಭರವಸೆ ನೀಡಿದರು. ಇದೆ ಸಂದರ್ಭ ಮೃತರ ಪುತ್ರ ಗಣೇಶ್ ಅವರೊಂದಿಗೆ ಮಾತನಾಡಿದ ಅವರು ಕುಟುಂಬದವರು ಅಪೇಕ್ಷಿಸಿದ ದಿನದಂದು ಶವದ ಮರಣೋತ್ತರ ಪರೀಕ್ಷೆ ನಡೆಸಲು ಇಲಾಖೆ ಸಹಕಾರ ನೀಡಲಿದೆ ಎಂದರು.
ಬಳಿಕ ಕುಂದಾಪುರದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಕೊಲೆ ಆರೋಪಿ ಜನಾರ್ದನ್‌ನ ವಿಚಾರಣೆ ನಡೆಸಿ ಘಟನಾವಳಿಗಳ ಕುರಿತು ಮಾಹಿತಿ ಪಡೆದುಕೊಂಡರು.
ಕುಂದಾಪುರದ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ. ಹಾಗೂ ಗೃಹ ರಕ್ಷಕದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಮೊದಲಾದವರು ಇದ್ದರು.