ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ‘ದೇಶದಲ್ಲಿ ನಡೆಯುತ್ತಿರುವ ವ್ಯಾಪಾರಿ ಪ್ರವೃತ್ತಿಯ ರಾಜಕಾರಣಿಗಳ ಆಡಳಿತದಿಂದ ಪ್ರಜಾತಂತ್ರ ವ್ಯವಸ್ಥೆ ಅರ್ಥ ಕಳೆದುಕೊಂಡಿದೆ. ಅದರ ಸ್ಥಾನದಲ್ಲಿ ಪ್ರಜೆಗಳ ಆಡಳಿತ ಅಥವಾ ಪ್ರಜಾಕೀಯ ನೆಲೆಗೊಳಿಸಬೇಕು ಎನ್ನುವುದು ಚಿತ್ರನಟ ಉಪೇಂದ್ರ ಸಾರಥ್ಯದ ‘ಉತ್ತಮ ಪ್ರಜಾಕೀಯ ಪಕ್ಷ’ದ ಉದ್ದೇಶ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ವೆಂಕಟೇಶ ಆರ್. ಹೇಳಿದರು.
ಬುಧವಾರ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಚುನಾವಣೆ ಮತ್ತು ರಾಜಕೀಯದಲ್ಲಿ ಹಣ ಮತ್ತು ತೋಳ್ಬಲ ಮೇಲುಗೈ ಸಾಧಿಸುತ್ತಿವೆ. ಅಭ್ಯರ್ಥಿ ಚುನಾವಣೆ ಗೆಲ್ಲಲು ಹಣ ಹೂಡಿದಾಗ ಗೆದ್ದ ಬಳಿಕ ಲಾಭಸಹಿತ ಹಿಂಪಡೆಯುವ ಅನಿವಾರ್ಯತೆ ಇದ್ದೇ ಇರುತ್ತದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಮಾಡುವ ದುಷ್ಪರಿಣಾಮವನ್ನು ಕಾಣುತ್ತಿದ್ದೇವೆ. ಭ್ರಷ್ಟಾಚಾರದ ಸಾಂಸ್ಥೀಕರಣ ಆಗಿಬಿಟ್ಟಿದೆ. ಪ್ರಜಾಕೀಯ ಇದಕ್ಕೆ ಪರ್ಯಾಯ ಎನಿಸಿದೆ. ಅದು ಜನರ ಆಶೋತ್ತರಗಳನ್ನು, ಬೇಡಿಕೆಗಳನ್ನು ಈಡೇರಿಸುವ ಆಡಳಿತ ನೀಡಲು ಬದ್ಧವಾಗಿದೆ. ಅದು ಯಾವುದೇ ಪ್ರಣಾಳಿಕೆಯನ್ನು ಹೊಂದಿಲ್ಲ. ಪ್ರಚಾರಕ್ಕೆ ವೆಚ್ಚ ಮಾಡುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ಅದರ ಗುರಿ. ಕೆಟ್ಟುಹೋಗಿರುವ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ. ಅದು ಜನರಿಗೆ ಈ ಸಂದೇಶವನ್ನು ಮುಟ್ಟಿಸಲು ಮಾಧ್ಯಮಗಳನ್ನು ಪ್ರಧಾನವಾಗಿ ನೆಚ್ಚಿಕೊಂಡಿದೆ’ ಎಂದು ಅವರು ಹೇಳಿದರು.
‘ತಮ್ಮ ಪ್ರಚಾರ ಮತ್ತು ಕಾರ್ಯ ವೈಖರಿಯ ಬಗ್ಗೆ ಹೇಳಿದ ಅವರು ಜನರ ಸಮಸ್ಯೆ, ಬೇಡಿಕೆಗಳನ್ನು ಪ್ರತಿ ಮನೆಗೂ ಪುಟ್ಟ ನಮೂನೆ ವಿತರಿಸಿ ಲಿಖಿತವಾಗಿ ಸಂಗ್ರಹಿಸಲಾಗುತ್ತಿದೆ. ಅದನ್ನು ಜನರ ಆದೇಶ ಎಂದು ಪರಿಗಣಿಸಿ ಆಡಳಿತ ವರ್ಗದ ಮುಂದಿರಿಸಿ, ಚರ್ಚಿಸಿ ಯೋಜನೆ ರೂಪಿಸಿ ಅನುಷ್ಠಾನಿಸಲಾಗುವುದು. ಎಲ್ಲ ಹಂತಗಳಲ್ಲೂ ಗರಿಷ್ಠ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಲಿದೆ. ಇಡೀ ವ್ಯವಸ್ಥೆ ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಎಂಬ ತತ್ವವನ್ನು ಆಧರಿಸಿರುತ್ತದೆ. ತಮ್ಮ ಪಕ್ಷದ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳನ್ನು ಅವರ ಸಮವಸ್ತ್ರ ಮತ್ತು ಅಧಿಕೃತ ಗುರುತು ಚೀಟಿಯಿಂದ ಗುರುತಿಸಬಹುದು’ ಎಂದರು.
‘31 ವರ್ಷದ ನಾನು ಪಿಯುಸಿ ವರೆಗೆ ಶಿಕ್ಷಣ ಪಡೆದಿರುವೆ. ಶಿವಮೊಗ್ಗದಲ್ಲಿ ವೆಲ್ಡಿಂಗ್ ವರ್ಕ್‌ಶಾಪ್ ಇದೆ. ಸಮುದಾಯಕ್ಕೆ ಒಳ್ಳೆಯದು ಮಾಡಬೇಕೆಂಬ ಹಂಬಲ ಹೊಂದಿದ್ದರಿಂದ ಉಪೇಂದ್ರ ಅವರಿಂದ ಪ್ರಭಾವಿತನಾಗಿ ಪ್ರಜಾಕೀಯಕ್ಕೆ ಬಂದೆ’ ಎಂದರು.
ಬೈಂದೂರು ಪ್ರದೇಶದಲ್ಲಿ ಪಕ್ಷದ ಹೊಣೆ ನಿರ್ವಹಿಸುತ್ತಿರುವ ಚೆನ್ನಯ್ಯ ಪೂಜಾರಿ ಉಪ್ಪುಂದ, ವೆಂಕಟೇಶ ಅವರ ಜತೆಗಾರರಾಗಿ ಶಿವಮೊಗ್ಗದಿಂದ ಬಂದಿದ್ದ ಡೇನಿ, ಪ್ರದೀಪ, ರಾಕೇಶ್, ಆದರ್ಶ ಇದ್ದರು.
ಧ್ಯೇಯಗಳು: ನಾವು ನಾಯಕರೂ ಅಲ್ಲ,ಸೇವಕರೂ ಅಲ್ಲ, ನಿಮ್ಮಿಂದ ವೇತನ ಪಡೆದು ಕೆಲಸ ಮಾಡುವ ಕಾರ್ಮಿಕರು. ಇದೊಂದು ಸಂಪೂರ್ಣ ಬದಲಾವಣೆಯ ಪ್ರಯತ್ನ. ಕೇವಲೊಂದು ದಿನದ ಪ್ರಜಾಪ್ರಭುತ್ವ ಅಳಿಸಿ ನಿರಂತರ ಪ್ರಜಾಪ್ರಭುತ್ವಕ್ಕಾಗಿ ಯುಪಿಪಿ. ಗೆಲ್ಲುವುದಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಬರುವವನು ರಾಜಕಾರಣಿ. ಗೆದ್ದ ನಂತರ ನಿರಂತರ ಸಂಪರ್ಕದಲ್ಲಿ ಇರುವವನು ಪ್ರಜಾಕಾರಣಿ. ನಿಮ್ಮದೇ ಆದ ಪ್ರಬಲವಾದ ಪ್ರಾದೇಶಿಕ ಪಕ್ಷದಿಂದ ಕೇಂದ್ರದಲ್ಲಿ ನಿಮಗೆ ಯಾವ ಸರ್ಕಾರ ಬೇಕು, ಕೇಂದ್ರದಿಂದ ನಿಮಗೆ ಏನಾಗಬೇಕು-ನಿರ್ಧಾರ ನಿಮ್ಮದೆ’ ಎಂದು ವೆಂಕಟೇಶ್ ಹೇಳಿದರು.