ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣವನ್ನು ಅಂಕಗಳಿಕೆಯ ಸಾಧನವಾಗಿ ಮಾತ್ರ ಪರಿಗಣಿಸಲದೇ ಕಲೆ ಸಾಹಿತ್ಯ ಕ್ರೀಡೆಯನ್ನೂ ಒಳಗೊಂಡಂತೆ ನೋಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಸಾಧ್ಯವಾಗುತ್ತದೆ. ಬೈಂದೂರು ಸುತ್ತಲಿನ ಕಲಾ ಸಂಸ್ಥೆಗಳು ಪಠ್ಯಾಧಾರಿತ ಶಿಕ್ಷಣದಲ್ಲಿನ ಕೊರತೆಯನ್ನು ನೀಗಿಸುವಲ್ಲಿ ಶ್ರಮವಹಿಸುತ್ತಿದೆ ಎಂದು ನಿವೃತ್ತ ಯೋಧ ಚಂದ್ರಶೇಖರ ನಾವಡ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಬುಧವಾರ ಲಾವಣ್ಯ ರಿ. ಬೈಂದೂರು ಇದರ ಅಂಗ ಸಂಸ್ಥೆ ರಿದಂ ನೃತ್ಯ ಶಾಲೆ ಬೈಂದೂರು ಇದರ 18ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗುವ ಶಿಕ್ಷಣ ಮಾತ್ರವೇ ಉತ್ತಮ ಶಿಕ್ಷಣ ಎಂದೆನಿಸಿಕೊಳ್ಳುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಳ್ಳದ ಶಿಕ್ಷಣ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಪೂರವಾಗಿ ಇದ್ದಾಗಲೇ ಮಕ್ಕಳ ಕಲಿಕೆ ಉತ್ತಮವಾಗುತ್ತದೆ ಎಂದರು.
ವೇಗದ ಹಾಗೂ ತಾಂತ್ರಿಕ ಬದುಕಿನ ನಡುವೆ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳನ್ನು ಒಳಗೊಂಡ ಸಂಸ್ಕಾರಯುತ ಶಿಕ್ಷಣದ ಕುರಿತು ನೈತಿಕವಾದ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆಯಿದೆ ಎಂದರು.
ಲಾವಣ್ಯ ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ರೋಟರಿ ಅಧ್ಯಕ್ಷ ಐ. ನಾರಾಯಣ, ವೈದ್ಯ ಡಾ. ರೋಶನ್ ಪಾಯಸ್, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು, ರಿದಂ ನೃತ್ಯ ಶಾಲೆಯ ಪಾಲಕರ ಸಮಿತಿ ಕಾರ್ಯದರ್ಶಿ ಸವಿತಾ ದಿನೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದ ಕೃಷ್ಣಮೂರ್ತಿ ಕಾರಂತ್ ಹಾಗೂ ಭರತನಾಟ್ಯ ವಿದುಷಿ ಮಾನಸ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ನೃತ್ಯ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ರಿದಂ ನೃತ್ಯ ಶಾಲೆಯ ಸಂಚಾಲಕ ನಾಗೇಂದ್ರ ಕುಮಾರ್ ಬಂಕೇಶ್ವರ ಸ್ವಾಗತಿಸಿದರು. ಮೂರ್ತಿ ಬೈಂದೂರು ಪ್ರಾರ್ಥಿಸಿದರು. ರೋಶನ್ ಕುಮಾರ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.