ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಅಪಘಾತಗಳು ಹೆಚ್ಚುತ್ತಿದ್ದು, ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತ ವಲಯ ಹಾಗೂ ಜನನಿಭೀಡ ಸ್ಥಳಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಇಂತಹ ರಸ್ತೆ ಸುರಕ್ಷತಾ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಂಡು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಮಾಹಿತಿ ನೀಡಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಹೇಳಿದರು.
ಅವರು ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಭಾನುವಾರ ಜರಗಿದ ಬ್ಯಾರಿಕೇಡ್ ಹಸ್ತಾಂತರ ಸಮಾರಂಭದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಎಸ್‌ಐ ಸುದರ್ಶನ್, ಹೊಸಾಡು ಗ್ರಾಪಂ ಸದಸ್ಯರಾದ ರಮೇಶ್ ಆಚಾರ್, ಸೀತಾರಾಮ ಶೆಟ್ಟಿ, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಹಿರಿಯರಾದ ಸಂಜೀವ ಶೆಟ್ಟಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ರಿಕ್ಷಾ ಚಾಲಕ, ಮಾಲಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಅಂಬಾ ಫ್ರೆಂಡ್ಸ್ ಮುಳ್ಳಿಕಟ್ಟೆ, ಬೆನಕಾ ಹಾರ್ಡ್‌ವೇರ್ ಮುಳ್ಳಿಕಟ್ಟೆ, ಆರಾಧನಾ ಬಾರ್ ಎಂಡ್ ರೆಸ್ಟೊರೆಂಟ್ ಹಾಗೂ ಎಚ್.ಮಹಾಬಲ ಶೆಟ್ಟಿ ಅವರು ರಾಷ್ಟ್ರೀಯ ಹೆದ್ದಾರಿ ೬೬ರ ಮುಳ್ಳಿಕಟ್ಟೆ ಪ್ರದೇಶದಲ್ಲಿ ಅಳವಡಿಸಲು ಕೊಡುಗೆಯಾಗಿ ನೀಡಿದ ನಾಲ್ಕು ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
ಪ್ರದೀಪ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.