ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಫೆರ್ರಿ ರಸ್ತೆಯ ನಿವಾಸಿಯಾದ ಖತೀಬ್ ಅಬು ಮಹಮ್ಮದ್ ಎನ್ನುವರ ಪತ್ನಿ ಕೆ ಮೆಹರುನ್ನೀಸ ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ಇದ್ದಾಗ ಮನೆಗೆ ಬಂದ ಬುರ್ಕಾಧಾರಿ ಕಾಪು ಮಜೂರಿನ ಫಿರ್ದಾಸ್(29) ಹಾಗೂ ಕುಂಟಲಪಾಡಿ ಮಹಮ್ಮದ್ ಆಸೀಫ್ (37) ಎನ್ನುವ ಜೋಡಿ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ನಂಬಿಸಿ ಕತ್ತಿನಲ್ಲಿ ಇದ್ದ ಚಿನ್ನವನ್ನು ಅಪಹರಿಸಲು ಯತ್ನಿಸಿದಾಗ ಕುಂದಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮನೆಯಲ್ಲಿ ಇದ್ದ 74 ವರ್ಷದ ಕೆ ಮೆಹರುನ್ನೀಸ ಅವರನ್ನು ಭೇಟಿಯಾಗಿದ್ದ ಬುರ್ಕಾ ಧರಿಸಿದ್ದ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಅಪರಿಚಿತ ವ್ಯಕ್ತಿ, ಸೊಸೆ ಸಮೀನಾ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಆಕೆ ಮನೆಯಲ್ಲಿ ಇಲ್ಲಾ, ನೀವು ಯಾರು ಎಂದು ಮರು ಪ್ರಶ್ನಿಸಿದಾಗ ಉತ್ತರಿಸಿದ್ದ ಬುರ್ಕಾಧಾರಿ ಮಹಿಳೆ ತಾನು ಆಕೆಯ ಸ್ನೇಹಿತೆ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ.
ಸೊಸೆಯ ಪರಿಚಿತರು ಇರಬೇಕು ಎಂದು ಭಾವಿಸಿ ಇಬ್ಬರನ್ನು ಮನೆಯ ಒಳಗೆ ಕುಳ್ಳಿರಿಸಿ ಸೊಸೆಗೆ ವಿಷಯ ತಿಳಿಸುವುದಾಗಿ ಪೋನ್ ಹಿಡಿದು ಆಕೆ ಮನೆಗೆ ಒಳಕ್ಕೆ ತೆರಳಿದ್ದರು.
ಈ ವೇಳೆ ಅವರನ್ನು ಹಿಂಬಾಲಿಸಿದ್ದ ಅಪರಿಚಿತ ವ್ಯಕ್ತಿ ಆಕೆಯನ್ನು ಬಲವಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಬಾಯಿ ಮುಚ್ಚಿಸಿ ಕತ್ತಿನಲ್ಲಿ ಇದ್ದ ಚಿನ್ನದ ಸರವನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಇದೆ ವೇಳೆ ಬುರ್ಕಾಧಾರಿ ಮಹಿಳೆ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಚಾಕುವನ್ನು ತೆಗೆದು ಜೀವ ಬೆದರಿಕೆ ಹಾಕಿದ್ದಾಳೆ.
ತನ್ನ ಮೇಲೆ ನಡೆದ ಅನಿರೀಕ್ಷಿತ ದಾಳೆಯಿಂದ ಗಾಭರಿಗೆ ಒಳಗಾದ ಕೆ ಮೆಹರುನ್ನೀಸ ಅವರು ಗಟ್ಟಿಯಾಗಿ ಬೊಬ್ಬೆ ಹೊಡೆದಾಗ ಮಸೀದಿಗೆಂದು ದಾರಿಯಲ್ಲಿ ಹೋಗುತ್ತಿದ್ದ ಜನರು ಬರುತ್ತಿರುವುದನ್ನು ಕಂಡು ಖದೀಮ ಜೋಡಿ ಓಡಿ ಹೋಗಲು ಪ್ರಯತ್ನಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳೀಯರ ಸಹಕಾರದಿಂದ ಖದೀಮ ಜೋಡಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಳೆದ 2018 ರಲ್ಲಿ ತಮಿಳುನಾಡಿನಲ್ಲಿ ಕೊಲೆಯಾದ ಮಂಗಳೂರು ಗಂಜಿಮಠದ ಮಹಮ್ಮದ್ ಸಮೀರ್ ಕೊಲೆ ಪ್ರಕರಣದ ಆರೋಪಿತರಾಗಿರುವ ಖದೀಮ ಜೋಡಿ ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರ ಬಂದಿದ್ದಾರೆ. ಕೊಲೆಯಾದ ಸಮೀರ್ ಆರೋಪಿ ಫಿರ್ದಾಸ್‌ಳ ಪತಿ.















