ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಶತಮಾನದ ಹೊಸ್ತಿಲಿನಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2018-19ನೇ ಸಾಲಿನಲ್ಲಿ 1.24ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್. ಗಣೇಶ್ ಕಾಮತ್ ಹೇಳಿದರು.
ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಆದಿತ್ಯವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ತಂತ್ರಜ್ಞಾನಕ್ಕೆ ಹೊಂದಿಕೊಂಡು ಸಹಕಾರಿಯ ಎಲ್ಲಾ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಮೊಬೈಲ್ ಆಪ್ ವ್ಯವಸ್ಥೆ ಕಲ್ಪಿಸಲಾಗುವುದು. ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಪ್ರೇರಣೆ ನೀಡುವ ಉದ್ದೇಶದಿಂದ ಸದಸ್ಯರೊಂದಿಗಿನ Uರಿಷ್ಠ ವ್ಯವಹಾರವನ್ನು ನೆಟ್ ಬ್ಯಾಂಕಿಂಗ್ ಮೂಲಕ ನಡೆಸಲು ವ್ಯವಸ್ಥೆ ಮಾಡಲಾಗುವುದು. ಸದಸ್ಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ ಮತ್ತು ಅವುಗಳಿಗೆ ಆರ್ಥಿಕ ಸಹಾಯ ನೀಡುವುದು ಹಾಗೂ ಗುಂಪುಗಳಿಂದ ತಯಾರಾದ ಉತ್ಪನ್ನಗಳಿಗೆ ಮತ್ತು ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದರ ಜೊತೆಗೆ ಸ್ವಸಹಾಯ ಗುಂಪುಗಳಿಗೆ ವಿಶೇಷ ಬಡ್ಡಿ ದರದಲ್ಲಿ ಸಾಲ ನೀಡಲು ಚಿಂತನೆ ನಡೆಸಲಾಗಿದೆ. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರುಗಳಿಸಿದ್ದು, ಸಂಘದ ಸದಸ್ಯರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವೇ ಸಹಕಾರಿಯ ಅಭಿವೃದ್ಧಿಗೆ ಕಾರಣ ಎಂದು ಅವರು ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಜಿ. ವೆಂಕಟೇಶ ನಾಯಕ್, ಜಿ.ವೆಂಕಟೇಶ ಶೆಣೈ, ಬಿ.ರಾಘವೇಂದ್ರ ಪೈ, ಉದಯಶಂಕರ ರಾವ್, ಮಹಾಬಲ ಪೂಜಾರಿ ಹಾಗೂ ಆನಂದ ಜಿ., ಲೆಕ್ಕ ಪರಿಶೋಧಕ ಶಾಂತಾರಾಮ ನಾಯಕ್, ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಉಪಸ್ಥಿತರಿದ್ದರು. ಇದೇ ಸಂದರ್ಭ ಇಂಜಿನಿಯರ್ ದಿನದ ಅಂಗವಾಗಿ ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಮತ್ತು ಉತ್ತಮ ಕಾರ್ಯನಿರ್ವಹಣಾಧಿಕಾರಿ ಪ್ರಶಸ್ತಿ ವಿಜೇತ ಸಹಕಾರಿಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿರ್ದೇಶಕ ನಾರಾಯಣ ಪೂಜಾರಿ ಸ್ವಾಗತಿಸಿದರು. ನಿರ್ದೇಶಕಿ ವತ್ಸಲಾ ಎಸ್.ಕಾಮತ್ ವರದಿ ಮಂಡಿಸಿದರು. ಕಾರ್ಯದರ್ಶಿ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಮಾಲಾ ಕೆ.ನಾಯಕ್ ವಂದಿಸಿದರು.