ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ‘ಕೃಷಿಯಲ್ಲಿ ಆದಾಯ ಹೆಚ್ಚಿಸಲು ಮಣ್ಣಿನ ಸಂರಕ್ಷಣೆ, ಮಣ್ಣಿನ ಪರಿಶೀಲನೆ, ತೇವಾಂಶ, ನೀರಿನ ಶೇಖರಣೆ ಅಗತ್ಯ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ಹೇಳಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬ್ರಹ್ಮಾವರ ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೃಷಿ ಮೇಳದ ‘ಲಾಭದಾಯಕ ಸಮಗ್ರ ಕೃಷಿ ಪದ್ಧತಿ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
‘ಮಣ್ಣಿನ ಫಲವತ್ತತೆ ತಿಳಿದು ಕೃಷಿ ಮಾಡಿದಲ್ಲಿ ಲಾಭ ಪಡೆಯಬಹುದು. ಇದಲ್ಲದೇ ಕೃಷಿಯೊಂದಿಗೆ ಕುರಿ, ಕೋಳಿ, ಆಡು, ಹಂದಿ ಸಾಕಣೆಗೆ ಒತ್ತು ನೀಡಬೇಕು. ಅಡಿಕೆ, ಕಾಳು ಮೆಣಸು, ನೆಲಗಡಲೆ ಬೆಳೆಗಳನ್ನೂ ಭತ್ತ, ತೆಂಗು, ಬಾಳೆ, ಅಡಿಕೆಯೊಂದಿಗೆ ಬೆಳೆಯುವ ಮೂಲಕ ರೈತರು ಸಮಗ್ರ ಕೃಷಿಯತ್ತ ಚಿತ್ತ ಹರಿಸಬೇಕು’ ಎಂದರು.
‘ಮನುಷ್ಯ ಗಿಡಮೂಲಿಕೆ ಬಳಸಿ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಅದೇ ರೀತಿ ಕೆಲವೊಂದು ಗಿಡಗಳನ್ನು ಸಾವಯವ ಗೊಬ್ಬರ ರೂಪದಲ್ಲಿ ಕೃಷಿ ಭೂಮಿಗೆ ಬಳಸುವುದರಿಂದ ಅನೇಕ ರೋಗಗಳನ್ನು ದೂರಮಾಡಬಹುದು’ ಎಂದು ಹೇಳಿದರು.
ರೈತರಿಗೆ ಬೇಕಾಗುವ ಪದಾರ್ಥಗಳು ಮನೆ ಬಾಗಿಲಿಗೆ ಮತ್ತು ಮಾರುಕಟ್ಟೆಯಲ್ಲಿ ಎಲ್ಲ ಕಡೆ ಸಿಗುವಂತಾದಲ್ಲಿ ಕೃಷಿಕರು ಕೃಷಿಯತ್ತ ಒಲವು ತೋರಿಸುತ್ತಾರೆ ಎಂದರು.
ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ ಹೈನುಗಾರಿಕೆ ಮಾಹಿತಿ ನೀಡಿದರು.
ವಿಸ್ತರಣಾ ನಿರ್ದೇಶಕ ಡಾ.ಎಸ್.ಪಿ.ನಾಗರಾಜ್ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ‘ಕೃಷಿಯತ್ತ ಯುವಕರನ್ನು ಹೇಗೆ ಆಕರ್ಷಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು. ಕೃಷಿ ಜತೆಗೆ ಕೃಷಿ ಉಪಕಸುಬುಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡುವ ಕಾರ್ಯ ಆಗಬೇಕು’ ಎಂದರು.
ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಸರ್ವೋತ್ತಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಆರ್.ಗುರುಮೂರ್ತಿ, ಬೈಂದೂರು ಎಳಜಿತ್‌ನ ಪ್ರಗತಿಪರ ಕೃಷಿಕ ತಿಮ್ಮಣ್ಣ ಹೆಗ್ಡೆ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು ಪಾಟೀಲ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ಸ್ವಾಗತಿಸಿದರು. ಕೆವಿಕೆ ಮುಖ್ಯಸ್ಥ ಡಾ.ಧನಂಜಯ ವಂದಿಸಿದರು. ಡಾ.ನವೀನ್ ನಿರೂಪಿಸಿದರು.