ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಾತ್ಮ ಗಾಂಧಿ ಜಯಂತಿಯ ೧೫೦ನೇ ವರ್ಷದ ಅಂಗವಾಗಿ ಸ್ವದೇಶಿ, ಸವರಾಜ್, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ೧೫೦ ಕಿ.ಮೀ ಪಾದಯಾತ್ರೆಯ ಭಾಗವಾಗಿ ಮೂರನೇ ದಿನ ಬೈಂದೂರು ವಿಧಾನಸಭಾ ಕ್ಷೇತ್ರದ ಕೊಲ್ಲೂರಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಅವರು, ರಾಷ್ಟ್ರೀಯ ನಾಯಕರ ಸೂಚನೆಯಂತೆ ಗಾಂಧೀಜಿ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಂತ ಗಾಂಧಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಲೋಕಸಭಾ ವ್ಯಾಪ್ತಿಯಲ್ಲಿ ೧೫೦ ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಸಂಚರಿಸಿ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ಮುಟ್ಟಿಸಿ, ಜನಜಾಗೃತಿ ಮೂಡಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಶೋಭಾ ಪುತ್ರನ್, ಸುರೇಶ್ ಬಟ್ವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್ ಮುಂತಾದವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಜಡ್ಕಲ್, ಮುದೂರು, ಹಳ್ಳಿಹೊಳೆ, ಸಿದ್ದಾಪುರ, ಕಮಲಶಿಲೆ, ಅಂಪಾರು ಮಾರ್ಗವಾಗಿ ಸಂಚರಿಸಿ ಸಂಜೆ ಮಾರಣಕಟ್ಟೆಯಲ್ಲಿ ಮುಕ್ತಾಯವಾಯಿತು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ತಾಲ್ಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ. ಡಿ. ಮೇಘರಾಜ್, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಭಟ್, ದೀಪಕ್‌ಕುಮಾರ ಶೆಟ್ಟಿ, ಯುವ ಮೋರ್ಚಾದ ಶರತ್‌ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾದ ಪ್ರಿಯದರ್ಶಿನಿ ಕಮಲೇಶ್, ಪಕ್ಷದ ಪ್ರಮುಖರಾದ ಹರ್ಕೂರು ಚಿತ್ತರಂಜನ್ ಹೆಗ್ಡೆ ಇದ್ದರು.