ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾರ್ವಜನಿಕರ ಅಗತ್ಯವನ್ನು ಅರಿತುಕೊಂಡು ಅವರಿಗೆ ಸರಕಾರದ ಪರ್ಯಾಯವಾಗಿ ನೆರವಾಗುವುದೇ ರೆಡ್‌ಕ್ರಾಸ್ ಸಂಸ್ಥೆಯ ಗುರಿಯಾಗಿದ್ದು, ಇಲ್ಲಿ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೇ ಎಲ್ಲರೂ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಹೇಳಿದರು
ಅವರು ಯಡ್ತರೆ ಬಂಟರ ಭವನದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ಬೈಂದೂರು ತಾಲೂಕು ಘಟಕವನ್ನು ಉದ್ಘಾಟಿಸಿ, ಸಂಸ್ಥಾಪಕರ ಪೋಟೋಗೆ ಮಾಲಾರ್ಪಣೆಗೈದು ಬಳಿಕ ಮಾತನಾಡಿದರು.
ಪ್ರಪಂಚದಾದ್ಯಂತ ರೆಡ್‌ಕ್ರಾಸ್‌ನ 700ಕ್ಕೂ ಅಧಿಕ ಶಾಖೆಗಳಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಶೆ.10ರಷ್ಟು ಜನಸಂಖ್ಯೆಯನ್ನು ಸರಕಾರದ ಕಾರ್ಯಕ್ರಮಗಳ ಮೂಲಕ ತಲುಪುವುದು, ಶೆ.2ರಷ್ಟು ಸದಸ್ಯರನ್ನು ಹೊಂದುವುದು, ಶೆ.1ರಷ್ಟು ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಪಡೆಯನ್ನು ರಚಿಸಿಕೊಳ್ಳುವ ಗುರಿಯನ್ನು ರೆಡ್‌ಕ್ರಾಸ್ ಹೊಂದಿದೆ ಎಂದರು.
ವೇದಿಕೆಯಲ್ಲಿ ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರ್, ಬೈಂದೂರು ತಾಲೂಕು ಹೋರಾಟ ಹಾಗೂ ಪುನರ್‌ರಚನಾ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಕುಂದಾಪುರ ರೆಡ್‌ಕ್ರಾಸ್ ಅಧ್ಯಕ್ಷ ಎಸ್. ಜಯಕರ ಶೆಟ್ಟಿ, ಶಿವರಾಮ ಶೆಟ್ಟಿ, ಬೈಂದೂರು ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ. ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮನೋಹರ ಶೆಟ್ಟಿ, ಖಜಾಂಚಿ ಸಂತೋಷ ಕುಮಾರ್ ಶೆಟ್ಟಿ ಇದ್ದರು.
ರೆಡ್‌ಕ್ರಾಸ್ ಬೈಂದೂರು ಘಟಕದ ಅಧ್ಯಕ್ಷ ನಿತಿನ್ ಶೆಟ್ಟಿ ಸ್ವಾಗತಿಸಿ, ಸಂದೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ ಶೆಟ್ಟಿ ಕಾರಿಕಟ್ಟೆ ಸಹಕರಿಸಿದರು.