ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಾಂಧೀಜಿಯವರ ಚಿಂತನೆ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕಷ್ಟೇ ಸೀಮಿತವಾಗಿರದೇ ಭಾರತೀಯರ ಆತ್ಮ ವಿಕಾಸ ಹಾಗೂ ಸ್ವರಾಜ್ ಕಲ್ಪನೆಯನ್ನು ಎಚ್ಚರಿಸುವುದೂ ಆಗಿತ್ತು. ನಮ್ಮೊಳಗಿನ ಸ್ವಾತಂತ್ರ್ಯ ಜಾಗೃತಗೊಳ್ಳಲು ಆತ್ಮ ವಿಕಾಸ ಅಗತ್ಯವೆಂಬುದನ್ನು ಅರಿತಿದ್ದ ಗಾಂಧಿ, ಭಾರತೀಯ ಶಿಕ್ಷಣ ಪದ್ದತಿಯಿಂದ ಅದು ಸಾಕಾರಗೊಳ್ಳುತ್ತದೆ ಎಂಬುದನ್ನೂ ಪ್ರತಿಪಾದಿಸಿದ್ದರು ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಹೇಳಿದರು.
ಅವರು ಶನಿವಾರ ಕುಂದಾಪುರದ ಕಲಾಮಂದಿರದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ನಡೆದ ನಾಲ್ಕು ದಿನಗಳ ಕಾರ್ಟೂನು ಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದಾಗ ಗಾಂಧೀಜಿ ನೋಡಿದ ಭಾರತ ಭಿನ್ನವಾಗಿತ್ತು. ಅಸ್ಪಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ಬಗೆಗೆ ಅವರು ಒತ್ತು ನೀಡಿದ್ದರು. ಸ್ವಾತಂತ್ರ್ಯ ಚಳುವಳಿಯೊಂದಿಗೆ ದೇಶದ ಆಂತರಿಕ ಸ್ವಾತಂತ್ರ್ಯದ ಸಂಕೊಲೆಗಳ ವಿರುದ್ಧ ಹೋರಾಟ ಆರಂಭಿಸಿದ್ದರು.
ಮಧ್ಯರಾತ್ರಿಯಲ್ಲಿ ಮಹಿಳೆ ಧೈರ್ಯವಾಗಿ ರಸ್ತೆಯಲ್ಲಿ ತಿರುಗುವಂತಾದರೇ ಅಂದೇ ದೇಶಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ದೊರೆತಂತೆ ಎಂದಿದ್ದ ಗಾಂಧಿಜಿಯವರು ಮಹಿಳಾ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ಹೆಣ್ಣನ್ನು ಕರುಣೆಯಿಂದ ನೋಡಿ ಮೀಸಲಾತಿ ನೀಡುವ ಅಗತ್ಯವಿಲ್ಲ ಎಂದಿದ್ದ ಅವರು ಪುರುಷನೊಳಗಿನ ಮನಸ್ಥಿತಿಯನ್ನು ಬದಲಿಸಿಕೊಂಡರೇ ಅಂದೇ ಮಹಿಳೆಯ ಸಬಲೀಕರಣ ಸಾಧ್ಯ ಎಂಬುದನ್ನು ಹೇಳಿದ್ದರು.
ಕಳೆದ 20 ವರ್ಷಗಳ ಈಚೆಗೆ ಗಾಂಧೀಜಿಯನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ತಮ್ಮ ಬದಕಿನುದ್ದಕ್ಕೂ ಯಾವುದೇ ಹುದ್ದೆಗಳನ್ನು ಅನುಭವಿಸದೇ ಸರಳವಾಗಿ ಬದುಕಿದವರ ಬಗ್ಗೆ ತಿಳಿದಯೇ ಭಾವನಾತ್ಮಕವಾಗಿ ಮಾತನಾಡುತ್ತಿದ್ದೇವೆ ಆದರೆ ಇತಿಹಾಸವನ್ನು ತಿಳಿಯಲು ಪ್ರಯತ್ನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿದ ಅವರು, ಗಾಂಧೀಜಿ ತಮ್ಮ ಬದುಕಿನ 78ವರ್ಷದ ತನಕ ದೇಶದಲ್ಲಿ ಏನೆಲ್ಲಾ ಆಗಬಾರದು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೋ ಆ ಘಟನೆ 1947ರಲ್ಲಿ ಭಾರತ ಪಾಕಿಸ್ತಾನ ವಿಭಜನೆ ಸಂದರ್ಭದ ಆ 11 ದಿವಸಗಳಲ್ಲಿ ಆಗಿಹೋಗಿತ್ತು. ಎಲ್ಲಾ ಧರ್ಮಗಳ ಮೂಲ ಕರುಣೆ ಎಂಬುದನ್ನು ಅರಿತಿದ್ದ ಗಾಂಧೀಜಿಯವರು ಇದನ್ನು ವಿರೋಧಿಸಿದ್ದರು. ಉಪವಾಸ ಮಾಡಿದ್ದರು ಎಂದರು.
ಮುಂದುವರಿದು ಮಾತನಾಡಿದ ಅವರು ಕಾರ್ಟೂನಿಷ್ಟರು ಥರ್ಮೊಮೀಟರ್ ಇದ್ದಂತೆ. ಜನರು ವ್ಯವಸ್ಥೆಯ ಒಳಗೆ ನಿಂತು ಮಾಡಿದರೆ ಕಾರ್ಟೂನಿಷ್ಠರು ವ್ಯವಸ್ಥೆಯ ಹೊರಗೆ ನಿಂತು ಯೋಜಿಸುತ್ತಾರೆ. ಜನರೊಂದಿಗೆ ಸಂವಾದಿಸುತ್ತಾರೆ. ಅಷ್ಟೇ ಓದುತ್ತಾರೆ. ಹಾಗಾಗಿ ಸಂಪಾದಕೀಯ ಪುಟದಲ್ಲಿನ ಪೂರ್ಣ ಲೇಖನ ಹೇಳುವುದನ್ನು ಒಂದು ಕಾರ್ಟೂನು ರೇಖೆಗಳ ಮೂಲಕ ಹೇಳುತ್ತದೆ. ಸಮಾಜದಲ್ಲಿ ಕಾರ್ಟೂನಿಷ್ಠರ ಮಾತ್ರ ಪ್ರಮುಖವಾಗಿದ್ದು, ಅವರ ಅಭಿಪ್ರಾಯ ಸ್ವಾತಂತ್ರವನ್ನು ಗೌರವಿಸುವುದು ನಮ್ಮ ಕರ್ತವ್ಯ ಹಾಗೇಯೇ ಕಾರ್ಟೂನಿಷ್ಠರ ರೇಖೆಯ ಅರ್ಥವನ್ನು ಅರಿಯುವ ಪ್ರೌಢಿಮೆ ನಮ್ಮಲ್ಲೂ ಬರಲಿ ಎಂದು ಆಶಿಸಿದರು.

ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟಿಸಿದರು. ಬೆಂಗಳೂರಿನ ಹಿರಿಯ ವ್ಯಂಗ್ಯಚಿತ್ರಕಾರ ವಿ. ಜಿ. ನರೇಂದ್ರ, ದಿ ಹಿಂದೂ ಇಂಗ್ಲಿಷ್ ದಿನಪತ್ರಿಕೆ ವ್ಯಂಗ್ಯಚಿತ್ರಕಾರ ಸುರೇಂದ್ರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪವರ್ ಲಿಪ್ಟರ್ ವಿಶ್ವನಾಥ ಗಾಣಿಗ ಬಾಳಿಕೆರೆ ಅವರನ್ನು ಸನ್ಮಾನಸಿಲಾಯಿತು.
ರಿಷಬ್ ಶೆಟ್ಟಿ ಅವರಿಗೆ ಕುಂದಾಪುರ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹೂ ನೀಡಿ ಬೋರ್ಡ್ ಮೇಲೆ ಧನ್ಯವಾದ ಎಂದು ಬರೆದು ಸನ್ಮಾನಿಸಿದ್ದು ವಿಶೇಷವಾಗಿತ್ತು. ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶ್ ಹಿರೇಗಂಗೆ, ಸಿನೆಮಾ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ, ಕಾರ್ಟೂನು ಹಬ್ಬದ ರೂವಾರಿ ಸತೀಶ್ ಆಚಾರ‍್ಯ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಇದನ್ನೂ ಓದಿ:
► ಕುಂದಾಪುರದಲ್ಲಿ ರೇಖೆಗಳ ಕಲರವ. ನ.23ರಿಂದ ಕಾರ್ಟೂನು ಹಬ್ಬ – https://kundapraa.com/?p=33781 .
► ವಿಡಂಬನಾ ದೃಷ್ಟಿ ಇದ್ದಾಗಲೇ ಉತ್ತಮ ಕಾರ್ಟೂನಿಷ್ಠ್ ಹುಟ್ಟಿಕೊಳ್ಳುತ್ತಾನೆ: ನಟ ರಿಷಬ್ ಶೆಟ್ಟಿ – https://kundapraa.com/?p=33824 .






























