ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶದಲ್ಲಿ ಸಂವಿಧಾನದ ಕಾರಣದಿಂದಾಗಿ ಕೋಟ್ಯಾಂತರ ದಮನಿತರು ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಸಮಾನತೆ, ಶಿಕ್ಷಣ, ಸ್ವಾವಲಂಭನೆ ಸೇರಿದಂತೆ ದೇಶದಲ್ಲಿ ರಚನಾತ್ಮಕ ಬದಲಾವಣೆಗಳಾದವು ಎಂದು ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಹೇಳಿದರು.
ಅವರು ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು, ದಲಿತ ಸಂಘರ್ಷ ಸಮಿತಿ ಬೈಂದೂರು ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೈಂದೂರಿನ ಪರಿಶಿಷ್ಟ ವರ್ಗದ ಆಶ್ರಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೩ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರು. ಎರಡು ವರ್ಷಗಳ ಕಾಲ ೨೭ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಪ್ರಜಾಪ್ರಭುತ್ವ ಮಾದರಿಯ, ಸಮಾನತೆಯಿಂದ ಆಡಳಿತ ಮಾಡುವ ಸಂವಿಧಾನವನ್ನು ನೀಡಿದ್ದಾರೆ ಎಂದರು.
ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸುರೇಶ್ ಜಿ. ನಾಯಕ್, ಡಾ| ಬಿ. ಆರ್. ಅಂಬೇಡ್ಕರ್ ಅವರ ಪೋಟೋಗೆ ಮಾಲಾರ್ಪಣೆ ಮಾಡಿ ಮಾತನಾಡಿ ನಮ್ಮ ಸಂಬಂಧಿಗಳೇ ಒಂದು ತಲೆಮಾರು ಕಳೆದರೆ ಅವರ ಹೆಸರು ನೆನಪಿರುವುದಿಲ್ಲ. ಅಂತಹದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ದೇಶಕ್ಕಾಗಿ ಶ್ರಮಿಸಿದ ಮಹಾನ್ ನಾಯಕರುಗಳ ಹೆಸರುಗಳ ಇಂದು ಎಲ್ಲರಿಗೂ ತಿಳಿದಿದೆ. ಸಂವಿಧಾನದ ಮೂಲಕ ದೇಶದ ಪ್ರತಿ ನಾಗರಿಕನಿಗೂ ಗೌರವಾಗಿ ಬದುಕುವಂತೆ ಮಾಡಿದ ಅವರೆಲ್ಲರೂ ಭಾರತೀಯರ ಮನದಲ್ಲಿ ಸದಾ ಉಳಿಯುತ್ತಾರೆ ಎಂದರು.
ದಸಂಸ ಸುರೇಶ್ ಬಾರ್ಕೂರು ಸಂವಿಧಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಭೋದಿಸಿದರು. ಬಳಿಕ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಡಾ| ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ ಮಾಸ್ತಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಬೈಂದೂರು ಪರಿಶಿಷ್ಟ ವರ್ಗದ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಾಜೇಶ್, ದಸಂಸ ಮಂಜುನಾಥ ನಾಗೂರು, ಡಾ| ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘದ ಸಂಚಾಲಕಿ ಗೀತಾ ಸುರೇಶ್ ವೇದಿಕೆಯಲ್ಲಿದ್ದರು.
ದಸಂಸನ ನಾಗರಾಜ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಡಾ| ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘದ ಕಾರ್ಯದರ್ಶಿ ಚೈತ್ರಾ ಸತೀಶ್ ವಂದಿಸಿದರು. ಭಾಸ್ಕರ್ ಕೆರ್ಗಾಲು, ಲಕ್ಷ್ಮಣ ಯಡ್ತರೆ ಮೊದಲಾದವರು ಇದ್ದರು.