ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರದ ನೀತಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕೋಟ್ಯಂತರ ಉದ್ಯೋಗ ನಾಶವಾಗಿದೆ. ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದಿದಂತೆ ಭಾಸವಾದರೂ ನೋಟು ಬ್ಯಾನ್, ಜಿಎಸ್‌ಟಿ ಕಾರಣದಿಂದ ನೇರವಾಗಿ ಕಟ್ಟಡ ಕಾರ್ಮಿಕರುಗಳ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಹೇಳಿದರು.
ಭಾನುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೈಂದೂರು ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಜರುಗಿದ ಕಟ್ಟಡ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ ದುಡಿಮೆಯ ಪಾಲು ಕಾರ್ಮಿಕರಿಗೆ ಸಿಗುತ್ತಿಲ್ಲ. ಕೇಂದ್ರ ಸರಕಾರ 2012ರ ಬೆಲೆಗಳ ಆಧಾರದಲ್ಲಿ ಕಾರ್ಮಿಕರ ಕೂಲಿಯನ್ನು ನಿಗದಿಗೊಳಿಸಿದೆ. ಆದರೆ 2019ರ ಬೆಲೆಯಲ್ಲಿ ಸರಕಾರ ನಿಗದಿ ಮಾಡಿರುವ ಕೂಲಿ ತೆಗೆದುಕೊಂಡ ಕಾರ್ಮಿಕನ ಕುಟುಂಬ ಬದುಕಲಾರದ ಸ್ಥಿತಿ ಇದೆ. ಕೂಲಿ ಹೆಚ್ಚಿಸಬೇಕು, ಸರಕಾರದ ದುಡ್ಡಿನಿಂದಲೇ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು ಮುಂತಾದ 12 ಬೇಡಿಕೆಗಳನ್ನು ಇರಿಸಿಕೊಂಡು ಜ.೮ರಂದು ದೊಡ್ಡ ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಈರುಳ್ಳಿ ಬೆಲೆ ಹೆಚ್ಚಿದ್ದರಿಂದ ರೈತನಿಗೆ ಅದರ ಲಾಭ ದೊರೆತಿಲ್ಲ. ಇತ್ತ ಕೊಳ್ಳುವವನಿಗೂ ದುಬಾರಿ ಬೆಲೆಯ ಬಿಸಿ ತಟ್ಟಿದೆ. ವಾಸ್ತವದಲ್ಲಿ ಮಧ್ಯವರ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕೃತಕ ಬೆಲೆ ಏರಿಕೆ ಸೃಷ್ಠಿಸಿದ್ದಾರೆ ಎಂದ ಅವರು ಮಾಧ್ಯಮಗಳು ಜನಸಾಮಾನ್ಯರ ಬೇಡಿಕೆಗಳ ಬಗ್ಗೆ ಚರ್ಚಿಸುವುದರ ಬದಲಾಗಿ ರಾಜಕಾರಣಿಗಳ ಸುತ್ತ ಸುತ್ತುತ್ತಿವೆ. ದೇಶದಲ್ಲಿ ರೈತರು, ಕಾರ್ಮಿಕರು, ಮೀನುಗಾರರು ಮೊದಲಾದ ಶ್ರಮಿಕ ವರ್ಗದ ನೋವು ಚರ್ಚೆಗೆ ಬಾರದಿರುವುದು ವಿಷಾದನೀಯ ಎಂದರು.
ಬೈಂದೂರು ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ದೇವಾಡಿಗ, ಕೋಶಾಧಿಕಾರಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮಾಧವ ಉಪ್ಪುಂದ, ರಾಜೀವ ದೇವಾಡಿಗ, ವಿಜಯ ಬಿ., ಉದಯ ಗಾಣಿಗ, ಮಂಜು ಬಡಾಕೆರೆ, ಅಮ್ಮಯ್ಯ ಪೂಜಾರಿ, ರಾಮ ಖಂಬದಕೋಣೆ, ನಾಗರತ್ನ ನಾಡ ಮೊದಲಾದವರು ವೇದಿಕೆಯಲ್ಲಿ ಇದ್ದರು.
ಬೈಂದೂರು ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿದರು.