ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನರು ಪ್ರತಿನಿತ್ಯವೂ ತೊಂದರೆಗೆ ಸಿಲುಕುವಂತಾಗಿದೆ. ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾದುಹೋಗುವ ಪ್ರತಿ ಪಂಚಾಯತಿಯಿಂದಲೂ ಲಿಖಿತವಾಗಿ ಮನವಿಗಳನ್ನು ನೀಡಿದ ಹೊರತಾಗಿಯೂ ಹೆದ್ದಾರಿ ಪ್ರಾಧಿಕಾರ ಜನರ ಸಮಸ್ಯೆಗೆ ಸ್ಪಂದಿಸದೇ ಮೊಂಡುತನ ಮೆರೆದಿದೆ. ಕೇಂದ್ರ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಜನರ ಗಂಭೀರ ಸಮಸ್ಯೆಗೆ ಯಾವುದೇ ಸ್ಪಂದನೆ ಇಲ್ಲದಂತಾಗಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರಿನಿಂದ ಶಿರೂರು ವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ತೀರ ಅವ್ಯವಸ್ಥಿತವಾಗಿ ನಡೆದಿದ್ದು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಮರವಂತೆಯಿಂದ ಬೈಂದೂರು ವರೆಗೆ ಹಮ್ಮಿಕೊಂಡ ಪಾದಯಾತ್ರೆಯ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿ ಕಾಮಗಾರಿ ಅಪೂರ್ಣವಾಗಿರುವಾಗಲೇ ಶಿರೂರು ಗಡಿಭಾಗದಲ್ಲಿ ಟೋಲ್ ಸಂಗ್ರಹಕ್ಕೆ ಐಆರ್‌ಬಿ ಕಂಪೆನಿ ಅಣಿಯಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು. ಜನರ ಸಮಸ್ಯೆಯನ್ನು ಆಲಿಸಿ, ನಿವಾರಣೆಗೆ ಕ್ರಮಕೈಗೊಳ್ಳಬೇಕು. ಹೆದ್ದಾರಿ ಕ್ರಮಬದ್ಧವಾಗಿ ನಿರ್ಮಾಣವಾಗುವ ಮೊದಲೇ ಟೋಲ್ ಸಂಗ್ರಹಕ್ಕೆ ಇಳಿದರೆ ಕಾಂಗ್ರೆಸ್ ಮತ್ತೆ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರತೀ ಮೂರು ಕಿಲೋಮೀಟರಿಗೆ ಒಂದರಂತೆ ನಿರ್ಮಿಸಿರುವ ಯು ತಿರುವುಗಳು ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ಹಾಗೂ ಗುಣಮಟ್ಟದವುಗಳಲ್ಲ. ಅಲ್ಲಿಯೇ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅವುಗಳನ್ನು ಅಪಾಯಹಿತ ಸ್ಥಿತಿಗೆ ತರಬೇಕು. ಬೈಂದೂರು-ಕೊಲ್ಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗಿದೆ. ಅದು ಹೆದ್ದಾರಿಗೆ ಸೇರುವ ಯಡ್ತರೆ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಿಸದಿದ್ದರೆ ಪರಿಣಾಮವನ್ನು ಊಹಿಸಲೂ ಅಸಾಧ್ಯ. ಜನ, ಸಂಚಾರ ದಟ್ಟಣೆ ಇರುವೆಡೆ ಸಮಾನಾಂತರ ಸರ್ವೀಸ್ ರಸ್ತೆ ಬೇಕು. ಹೆದ್ದಾರಿ ಕಾಮಗಾರಿ ನಡೆಸುವಾಗ ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಪೈಪ್‌ಗಳನ್ನು ನಾಶಪಡಿಸಿದ್ದು, ಅವುಗಳ ದುರಸ್ತಿಯಾಗಬೇಕು, ಹೆದ್ದಾರಿ ಬದಿ ಸೂಕ್ತ ಚರಂಡಿ ಇಲ್ಲವಾದುದರಿಂದ ಮಳೆಗಾಲದಲ್ಲಿ ಹೆದ್ದಾರಿ ಮೇಲೆ ನೀರು ಹರಿಯುತ್ತದೆ. ಕೆಲವೆಡೆ ಕೃತಕ ನೆರೆ ಏರ್ಪಟ್ಟು ಕೃಷಿ ಭೂಮಿಗೆ, ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಸಮಸ್ಯೆ ನಿವಾರಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ, ಪ್ರಮುಖರಾದ ಜಗದೀಶ ದೇವಾಡಿಗ, ಪ್ರಮಿಳಾ ದೇವಾಡಿಗ, ವಾಸುದೇವ ಪೈ ಸಿದ್ಧಾಪುರ, ಗ್ರೀಷ್ಮಾ ಭಿಡೆ, ನಾಗರಾಜ ಗಾಣಿಗ ಬಂಕೇಶ್ವರ, ಮೋಹನ ಪೂಜಾರಿ ಉಪ್ಪುಂದ, ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಯುವ ಕಾಂಗ್ರೆಸ್‌ನ ಪ್ರಶಾಂತ ಪೂಜಾರಿ ಸೇರಿದಂತೆ ವಿವಿಧ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬೈಂದೂರಿನಲ್ಲಿ ಸಭೆ ನಡೆಯುತ್ತದೆ.
ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಅಲ್ಲಲ್ಲಿ ಮಜ್ಜಿಗೆ, ನೀರು ನೀಡಲಾಯಿತು. ಸುಮಾರು ೧೬ ಕಿ.ಮೀ ತನಕ ಪಾದಯಾತ್ರೆ ಸಾಗಿತ್ತು.
ಇದನ್ನೂ ಓದಿ:
► ಚತುಷ್ಪಥ ಹೆದ್ದಾರಿ ಸರಿಪಡಿಸಲು ಆಗ್ರಹಿಸಿ ಕಾಂಗ್ರೆಸ್ ನೇತೃತ್ವಲ್ಲಿ ಪ್ರತಿಭಟನಾ ಪಾದಯಾತ್ರೆ – https://kundapraa.com/?p=34219 .