ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೃಷಿ ಕೂಲಿಕಾರರ ಕೊರತೆ, ಕಾಡು ಪ್ರಾಣಿಗಳ ಹಾವಳಿ ಹಾಗೂ ರಾಜಕಾರಣಿಗಳ ಸುಳ್ಳು ಆಶ್ವಾಸನೆಗಳ ನಡುವೆ ರೈತ ಕೃಷಿಯನ್ನು ನೆಚ್ಚಿಕೊಂಡು ಮುಂದುವರಿಯಲು ಸಾಧ್ಯವಾಗದ ಸ್ಥಿತಿ ಇದೆ. ಹಠವಿದ್ದ ರೈತರು ನಿರಂತರವಾಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಭಾರತೀಯ ಕಿಸಾಸ್ ಸಂಘದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಬಿ. ವಿ ಪೂಜಾರಿ ಹೇಳಿದರು.
ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಹಾಗೂ ರೈತ ಸಿರಿ, ರೈತ ಸೇವಾ ಒಕ್ಕೂಟ ಉಪ್ಪುಂದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ರೈತಸಿರಿ ಸಭಾಭವನದಲ್ಲಿ ಜರುಗಿದ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ರೈತ ಗೋಪಾಲ ಉಡುಪ ಮೂಡುಮಠ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ೨೦೨೦ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಸಂಘದ ನಿರ್ದೇಶಕರಾದ ಮೋಹನ ಪೂಜಾರಿ ಉಪ್ಪುಂದ, ಸುರೇಶ್ ಶ್ಯಾನುಭೋಗ್ ಇದ್ದರು.
ಸಂಸ್ಥೆಯ ನಿರ್ದೇಶಕ ಸುರೇಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುಮಂಗಲ ಕಾರಂತ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ ಸ್ವಾಗತಿಸಿದರು. ಹಿರಿಯ ಪ್ರಬಂಧಕ ಚಂದ್ರಯ್ಯ ಶೆಟ್ಟಿ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.