ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಫೇಸ್ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿಯಲ್ಲಿ ಉದ್ಯೋಗದಲ್ಲಿದ್ದ ತಾಲೂಕು ಕೋಟೇಶ್ವರ ಸಮೀಪದ ಬೀಜಾಡಿ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರ ಅಲ್ಲಿನ ಪೊಲೀಸರಿಂದ ಬಂಧಿತರಾಗಿದ ಘಟನೆ ನಡೆದಿದೆ.
ಘಟನೆಯ ವಿವರ:
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಮರ್ಥಿಸಿ ಹರೀಶ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಸೌದಿ ದೇಶದ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಘಟನೆಯ ಬಗ್ಗೆ ಹರೀಶ್ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ಬಳಿಕ ಡಿ.19 ರಾತ್ರಿ ತನ್ನ ಫೇಸ್ ಬುಕ್ ಖಾತೆ ಡಿ-ಆಕ್ಟಿವೇಟ್ ಮಾಡಿದ್ದರು. ಆದರೆ ಮತ್ತೆ ಹರೀಶ್ ಬಂಗೇರ ಎನ್ನುವ ನಕಲಿ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ಲೋಡ್ ಆಗಿದ್ದು ಅದು ವೈರಲ್ ಆಗಿ ಆತ ಕೆಲಸ ನಿರ್ವಹಿಸುತ್ತಿದ್ದ ಕಂಪೆನಿಯೂ ಕೆಲಸದಿಂದ ವಜಾಗೊಳಿಸಿತ್ತು. ಬಳಿಕ ಸೌದಿ ಪೊಲೀಸರು ಹರೀಶ ಅವರನ್ನು ಬಂಧಿಸಿದ್ದರು.
ಹರೀಶ್ ತನ್ನ ಫೇಸ್ ಬುಕ್ ಐಡಿ ನಿಷ್ಕ್ರೀಯಗೊಳಿಸಿದ ನಂತರ ಮತ್ತೆ ಅವರ ಪೋಟೋ ಬಳಸಿಕೊಂಡು ನಕಲಿ ಖಾತೆಯೊಂದನ್ನು ತೆರೆಯಲಾಗಿದ್ದು, ಈ ಬಗ್ಗೆ ಅವರು ತಮ್ಮ ಪತ್ನಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ತಿಳಿಸಿದ್ದರು. ಅದೇ ಖಾತೆಯಲ್ಲಿ ಮತ್ತೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿದ್ದು, ಇದು ಹರೀಶ್ ಕಾರ್ಯನಿರ್ವಹಿಸುತ್ತಿದ್ದ ಕಂಪೆನಿ ಹಾಗೂ ಅಲ್ಲಿನ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಇದು ಫೇಕ್ ಖಾತೆ ಮಾಡಿ ಕಿಡಿಗೇಡಿಗಳು ಮಾಡಿರುವ ಪ್ರಮಾದವೆಂದು ಹರೀಶ್ ಅವರ ಪತ್ನಿ ಆರೋಪಿಸಿದ್ದು ಈ ಬಗ್ಗೆ ಉಡುಪಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೀಜಾಡಿ ಗೋಯಾಡಿಬೆಟ್ಟು ನಿವಾಸಿ ಸಿದ್ದು ಎನ್ನುವರ ನಾಲ್ವರು ಮಕ್ಕಳ ಪೈಕಿ ಹರೀಶ್ ಬಂಗೇರ ಒರ್ವರು. ದ್ವಿತೀಯ ಪಿಯುಸಿ ಬಳಿಕ ಐಟಿಐ ತರಬೇತಿ ಪಡೆದಿದ್ದ ಹರೀಶ್, ಮೊದಲಿಗೆ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರು ವರ್ಷದ ಹಿಂದೆ ಸೌದಿಯ ಕಂಪೆನಿಯೊಂದರಲ್ಲಿ ಎಸಿ ಮೆಕ್ಯಾನಿಕ್ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಕುಂಭಾಸಿಯ ಸುಮನಾ ಎನ್ನುವರನ್ನು ವಿವಾಹವಾಗಿದ್ದ ಇವರಿಗೆ ೨ ವರ್ಷದ ಹೆಣ್ಣುಮಗುವಿದೆ. ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ಇವರ ವಾಸ. ಹರೀಶ್ ಸೌದಿ ಪೊಲೀಸರ ವಶದಲ್ಲಿದ್ದು ಇಡೀ ಕುಟುಂಬ ಕಣ್ಣೀರಿಡುತ್ತಿದೆ. ತನ್ನ ಮಗ ತಪ್ಪು ಮಾಡಿಲ್ಲ ಎಂದು ಒಂದೆಡೆ ತಾಯಿ, ತನ್ನ ಪತಿಯ ತಪ್ಪಿಲ್ಲವೆಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.
ಹರೀಶ್ ಬಂಗೇರ ನಿವಾಸಕ್ಕೆ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ಬೀಜಾಡಿ ಸೇರಿದಂತೆ ಹಲವರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಅವರ ಬಿಡುಗಡೆಗೆ ವಿವಿಧ ನಾಯಕರುಗಳು ಪ್ರಯತ್ನಿಸುತ್ತಿದ್ದು, ಘಟನೆಯ ವಿವರ ಪಡೆದುಕೊಂಡು ರಾಯಭಾರಿ ಕಛೇರಿಯ ಮೂಲಕ ಸೌದಿಯ ಪೊಲೀಸರನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ.