ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಸ್ತು ಕೇಂದ್ರಿತ ಶೈಕ್ಷಣಿಕ ವಾತಾವರಣದ ಜೊತೆಗೆ ಸಾಹಿತ್ಯ-ಕ್ರೀಡೆ-ಸಾಂಸ್ಕೃತಿಕ ಅಭಿರುಚಿಯ ಮುಖೇನ ತೀರಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಧಾರೆಯೆರೆಯುವಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಶ್ರಮಿಸುತ್ತಿದೆ ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಮ್. ಸುಕುಮಾರ ಶೆಟ್ಟಿ ಹೇಳಿದರು.
ಇವರು ಸ. ಹಿ. ಪ್ರಾ. ಶಾಲೆ ಕಾಲ್ತೋಡಿನಲ್ಲಿ ಒಂದು ವಾರದ ಕಾಲ ಆಯೋಜಿಸಲಾದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ಕಾಲ್ತೋಡು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ ಮಾತನಾಡಿ, ಆಧುನಿಕತೆಗೆ ಅತಿಯಾಗಿ ತೆರೆದುಕೊಳ್ಳದ ಕಾಲ್ತೋಡು ಗ್ರಾಮದಲ್ಲಿ ಆಕೃತಿಗೊಂಡಿರುವ ಈ ಶಿಬಿರವು ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುವುದರ ಜೊತೆಗೆ ಸಹಬಾಳ್ವೆ ಹಾಗೂ ಸಾಮಾಜಿಕ ಸೇವಾ ಬದ್ಧತೆಯ ಕುರಿತು ಅರಿವು ಮೂಡಿಸುವುದು ಎಂದರು.
ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭ ಬೊಳಂಬಳ್ಳಿ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್, ವಿಜಯ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮ್ಯಾನೇಜರ್ ಸುಧಾಕರ್ ಶೆಟ್ಟಿ, ಶ್ರೀ ಮಹಾಲಸಾ ಮಾರಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಶೆಟ್ಟಿ, ಹೆರಂಜಾಲು ಗುಡೆ ಮಹಾಲಿಂಗೇಶ್ವರ ಹೋಮ್ ಪೈಪ್ಸ್‌ನ ಜಯಶೀಲ್ ಶೆಟ್ಟಿ, ಕಾಲ್ತೋಡು ಗ್ರಾಮ ಪಂಚಾಯತ್‌ನ ಸದಸ್ಯರಾದ ವಿಜೇಂದ್ರ ಆಚಾರ್ಯ ಮತ್ತು ಚಂದ್ರಶೇಖರ್ ಶೆಟ್ಟಿ, ನಿವೃತ್ತ ಶಿಕ್ಷಕ ಸೂಲಿಯಣ್ಣ ಶೆಟ್ಟಿ, ಕಾಲ್ತೋಡು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ| ವೀಣಾ ಕಾರಂತ್, ಕಾಲ್ತೋಡು ಸ. ಹಿ. ಪ್ರಾ. ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಅಣ್ಣಪ್ಪ ಭೋವಿ ಹಾಗೂ ಮುಖ್ಯೋಪಾಧ್ಯಾಯ ಭಾಸ್ಕರ್ ಕೆ. ಎಚ್., ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕರುಗಳಾದ ಪ್ರಸನ್ನ ಮತ್ತು ಸನಿಯಾ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಸತೀಶ್ ಶೆಟ್ಟಿ ಹೆಸ್ಕತ್ತೂರು ಸ್ವಾಗತಿಸಿದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಎನ್.ಎಸ್.ಎಸ್. ಸಹ ಯೋಜನಾಧಿಕಾರಿ ರೇಷ್ಮಾ ಶೆಟ್ಟಿ ವಂದಿಸಿ, ಇಂಗ್ಲೀಷ್ ಉಪನ್ಯಾಸಕಿ ಅಮೃತಾ ನಿರೂಪಿಸಿದರು.