ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪೌರತ್ವ ತಿದ್ದುಪಡಿ ಕಾಯಿದೆಯ ಹೆಸರಿನಲ್ಲಿ ಮತೀಯವಾದವನ್ನು ಮುನ್ನೆಲೆಗೆ ತಂದು ದೇಶದಲ್ಲಿ ಕುಸಿಯುತ್ತಿರುವ ಕೈಗಾರಿಕೆಗಳು, ಹೆಚ್ಚುತ್ತಿ ನಿರುದ್ಯೋಗ ಹಾಗೂ ಆರ್ಥಿಕ ಬಿಟ್ಟಕ್ಕು, ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಮರೆಮಾಚುವ ವ್ಯವಸ್ಥಿತ ಹುನ್ನಾರವನ್ನು ಕೇಂದ್ರ ಸರಕಾರ ಮಾಡಿದೆ ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಸೋಮವಾರ ಶಿರೂರು ಗ್ರಾಮ ಪಂಚಾಯತ್ ಎದುರು ಶಿರೂರು ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಸಮಿತಿಯ ನೇತೃತ್ವ ವಹಿಸಿ ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ಹಿಂದೂಗಳು ಹಾಗೂ ಮುಸ್ಲಿಂಮರನ್ನು ಒಡೆದು ಆಳುವ ನೀತಿಯನ್ನು ಚುನಾವಣಾ ಪೂರ್ವವೇ ಬಿಜೆಪಿ ಪಕ್ಷ ಪರೋಕ್ಷವಾಗಿ ತಿಳಿಸಿರುವುದನ್ನು ಕೇಂದ್ರ ಸರಕಾರ ಇಂದು ಸಿಎಬಿ ಹಾಗೂ ಎನ್‌ಆರ್‌ಸಿ ಕಾಯಿದೆಗಳ ಮೂಲಕ ಮುನ್ನೆಲೆಗೆ ತಂದು ಇದು ಕೇವಲ ಮುಸ್ಲಿಂರ ಸಮಸ್ಯೆಗೆ ಎಂದು ಬಿಂಬಿಸಿ ಹಿಂದೂ ವೋಟ್‌ಬ್ಯಾಂಕ್ ಭದ್ರಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದೆ.
ಸಿಎಬಿ ಹಾಗೂ ಎನ್‌ಆರ್‌ಸಿಯಿಂದ ಕೇವಲ ಮುಸ್ಲಿಂಮರಿಗಷ್ಟೇ ಸಮಸ್ಯೆ ಎಂದು ಭಾವಿಸಿರುವುದು ತಪ್ಪು. ದೇಶದಲ್ಲಿ ವಾಸಿಸುತ್ತಿರುವ ಬಡವರು, ಹಿಂದುಳಿವರು, ಆದಿವಾಸಿಗಳಿಗಳಿಗೆ ಪೌರತ್ವ ಸಾಬೀತುಪಡಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇರುವಾಗ ಬೇರೆ ದೇಶದಿಂದ ಬಂದವರಿಗೆ ಪೌರತ್ವ ನೀಡುವುದು ನೀಡುವುದು ಹೇಳಿದಷ್ಟು ಸರಳವೇ ಎಂದು ಪ್ರಶ್ನಿಸಿದ ಇದು ಜನಸಾಮಾನ್ಯರು ಹಾಗೂ ಆಳು ಶ್ರೀಮಂತರ ಹಿತಾಸಕ್ತಿ ಕಾಯುತ್ತಿರುವ ಸರಕಾರದ ನಡುವಿನ ಸಂಘರ್ಷ ಎಂದರು.
ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಉದಯ ಕುಮಾರ್ ತಲ್ಲೂರು ಮಾತನಾಡಿ ದಲಿತರು, ಹಿಂದೂಳಿದವರು, ಅಲ್ಪಸಂಖ್ಯಾತರು ಈ ದೇಶದ ಮೂಲ ನಿವಾಸಿಗಳು. ಆರ್ಯರು ಇಲ್ಲಿಗೆ ವಲಸೆ ಬಂದವರು. ಆದರೆ ಅವರೇ ಇಂದು ದೇಶದಲ್ಲಿ ಪೌರತ್ವ ಕಾಯಿದೆಯನ್ನು ಮುನ್ನೆಲೆಗೆ ತಂದಿದ್ದಾರೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು.
ಬಿಡ್ಜಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಕಾರ್ಯದರ್ಶಿಯಾಗಿ ಇಕ್ಬಾಲ್ ಬೆಳ್ಳಾರೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಸಿಪಿಐಎಂ ಬೈಂದೂರಿನ ವೆಂಕಟೇಶ್ ಕೋಣಿ, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿದರು. ಈ ಸಂದರ್ಭ ಎಚ್. ಎಸ್. ಸಿದ್ದೀಕ್, ಅನ್ವರ್ ಶಿರೂರು, ನೂರ್ ಮಹಮ್ಮದ್, ಮುಲ್ಲಾ ಫಾರೂಕ್, ಸದ್ಕೆ ಸಯೀದ್, ಕರಾಣಿ ಮೊಹಿದ್ದಿನ್ ಮೊದಲಾದವರು ಉಪಸ್ಥಿತರಿದ್ದರು.
ನೂರಾನಿ ಮಸಿಇಯಿಂದ ಗ್ರಾಮ ಪಂಚಾಯತ್ ತನಕ ಮೆರವಣಿಗೆ ಸಾಗಿ ಪ್ರತಿಭಟನಾ ಸಭೆಯ ಮೂಲಕ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಯಿತು. ಶೋಯೇಬ್ ಅರೆಹೊಳೆ ಕಾರ್ಯಕ್ರಮ ನಿರೂಪಿಸಿದರು.