ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ವತ್ತಿನಕಟ್ಟೆ ತ್ರಿಶಕ್ತಿ ಸ್ವರೂಪಿಣಿ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಇದೇ 16 ರಿಂದ 19 ರವರೆಗೆ ಅಷ್ಟಬಂಧಪೂರ್ವಕ ಬ್ರಹ್ಮಕಲಶೋತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಹಾಸತಿ ಅಮ್ಮನವರನ್ನು ಆರಾಧಿಸುವ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಈ ಸಂದರ್ಭ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಲ್ಕು ದಿನ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ 35-40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು.
ಕಾರ್ಯಕ್ರಮಗಳ ವಿವರ:
ಇದೇ 16ರ ಬೆಳಿಗ್ಗೆ ಸೇನೇಶ್ವರ ದೇವಸ್ಥಾನ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಬಳಿಕ ವತ್ತಿನಕಟ್ಟೆಗೆ ಮೆರವಣಿಗೆ ನಡೆಯುವುದು. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಬೈಂದೂರು ತಾಲ್ಲೂಕು ಘಟಕ, ಯೋಜನೆಯ ಬಿ. ಸಿ. ಟ್ರಸ್ಟ್ ಮತ್ತು ಹಿರಿಯ ಭಜನಾ ಹಾಡುಗಾರರ ಸಹಯೋಗದಲ್ಲಿ ಅಖಂಡ ಭಜನೋತ್ಸವ ಜರುಗಲಿದೆ.
ದೇವಿಯ ಸನ್ನಿಧಿಯಲ್ಲಿ ಸ್ಥಾನಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಪೂಜಾ ಬಲಿ, ಮಹಾಪೂಜೆ ನಡೆಯಲಿವೆ. ನಂತರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಉದ್ಘಾಟಿಸುವರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
17ರಂದು ನಾಗದೇವರ ವರ್ಧಂತಿ, ನಾಗದರ್ಶನ, ದೇವಿಯ ಸನ್ನಿಧಿಯಲ್ಲಿ ಭಜನಾ ಮಂಗಲೋತ್ಸವ, ಕಡ್ಕೆ ಬೀರೇಶ್ವರ ಹರಿಸೇವಾ ಸಮಿತಿಯಿಂದ ಹೌಂದ್ರಾಯನ ವಾಲಗ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದ ಬಳಿಕ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಸಾಂಸ್ಕ್ರತಿಕ ವೈಭವ ಪ್ರದರ್ಶನಗೊಳ್ಳಲಿದೆ.
18ರ ಮಂಗಳವಾರ ಅಷ್ಟಬಂಧ ಪುನರ್‌ಪ್ರತಿಷ್ಠೆ, ಕಲಾತತ್ವಹೋಮ, ಶ್ರೀ ಮಹಾಕಾಳಿ ವಿಷ್ಣುಸಹಸ್ರನಾಮ ತಂಡದವರಿಂದ ವಿಷ್ಣು ಸಹಸ್ರನಾಮ ಪಠಣ, ವಿಷ್ಣುಸಹಸ್ರನಾಮ ಯಾಗ, ಮಹಾಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀನಿವಾಸ ಪದ್ಮಾವತಿ ಮದುವೆ ದಿಬ್ಬಣ ಯಡ್ತರೆ ಜಂಕ್ಷನ್‌ನಿಂದ ಬೈಂದೂರು ಮುಖ್ಯರಸ್ತೆಯ ಮೂಲಕ ವತ್ತಿನಕಟ್ಟೆ ಶ್ರಿದೇವಿ ಸನ್ನಿಧಿಯ ಸೇರುತ್ತದೆ. ಬಳಿಕ ತಿರುಪತಿ ಆಚಾರ‍್ಯರಿಂದ ದಾಸ ಶೈಲಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಶ್ರೀ ವಾರಿ ಫೌಂಡೇಶನ್ ಬೆಂಗಳೂರು ಅವರು ನಿರೂಪಿಸಲಿದ್ದಾರೆ. ಈ ನಡುವೆ ಸಂಜೆ ೫ ಗಂಟೆಯಿಂದ ದೀಪಿಕಾ ಪಾಂಡುರಂಗಿ ಅವರು ದಾಸರ ಪದಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.
19ರ ಬುಧವಾರ ವಿವಿಧ ಹೋಮ, ಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಪಾತ್ರಿ ಅಣ್ಣಪ್ಪ ಪೂಜಾರಿ, ದೊಟ್ಟಯ್ಯ ಪೂಜಾರಿ, ಕೃಷ್ಣಯ್ಯ ಮದ್ದೋಡಿ, ರವೀಂದ್ರ ಶ್ಯಾನುಭಾಗ್, ಉದಯ ಆಚಾರ್ಯ ಉಪಸ್ಥಿತರಿದ್ದರು.