ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೀದರಿನ ರಂಗಮಂದಿರದಲ್ಲಿ ನ್ಯೂ ಸೆಂಚುರಿ ರೋಟರಿ ಕ್ಲಬ್ ಆಯೋಜಿಸಿದ್ದ ಮಿಸ್ ಉಡಾನ್ ೨೦೨೦ ಸೌಂದರ್ಯ ಸ್ಪರ್ಧೆಯಲ್ಲಿ ಕುಂದಾಪುರ ವಂಡ್ಸೆ ಮೂಲದ ಅನುಪಮ ಹೊಳ್ಳ ಪ್ರಥಮ ಸ್ಥಾನವನ್ನು ಅಲಂಕರಿಸಿ ಪ್ರಶಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಅವರು ದೈಹಿಕ ಸೌಂದರ್ಯದ ಜೊತೆ ಅತ್ಯುತ್ತಮ ವ್ಯಕ್ತಿತ್ವ ರೂಪಿಸುಕೊಳ್ಳುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಲೀಲಾಜಾಲವಾಗಿ ಉತ್ತರಿಸುವುದರೊಂದಿಗೆ ತನ್ನ ಹೃದಯ ಸೌಂದರ್ಯವನ್ನೂ ಮೆರೆದಿದ್ದಾರೆ.
ವಿವಿಧ ಮಜಲುಗಳುಳ್ಳ ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ , ಆಂಧ್ರಪ್ರದೇಶ, ತೆಲಂಗಾಣ ಕರ್ನಾಟಕ ಹಾಗೂ ಇತರ ರಾಜ್ಯಗಳ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನ್ಯೂ ಸೆಂಚುರಿ ರೋಟರಿ ಕ್ಲಬ್ ಬೀದರ್ ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.
ಪ್ರಥಮ ಸುತ್ತಿನಲ್ಲಿ ಮೂವತ್ತು ವಿದ್ಯಾರ್ಥಿನಿಯರು ಸ್ಪರ್ಧಿಸಿದ್ದು ಎರಡನೇ ಸುತ್ತಿಗೆ ಸಂಖ್ಯೆ ಆರಕ್ಕೆ ಇಳಿಯಿತು. ದ್ವಿತೀಯ, ತೃತೀಯ ಸ್ಥಾನವನ್ನು ಬೀದರ್ ನ ಎಸ್. ಬಿ.ಪಾಟೀಲ್ ಡೆಂಟಲ್ ಕಾಲೇಜು ಹಾಗೂ ತೆಲಂಗಾಣದ ಆಚಾರ್ಯ ಕಾಲೇಜಿನ ವಿದ್ಯಾರ್ಥಿನಿಯರು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರು, ಕಲಾವಿದರು ಹಲವಾರು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದು ವೇದಿಕೆಗೆ ಕಳೆ ತಂದಿತ್ತು.
ಬೀದರಿನಲ್ಲಿ ವಾಸಿಸುತ್ತಿರುವ ಅನುಪಮಾ ಅವರು ಮೂಲತಃ ಕುಂದಾಪುರದವರು. ತಂದೆ ಗೋಪಾಲಕೃಷ್ಣ ಹೊಳ್ಳ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಯವರು. ತಾಯಿ ಮಾಲಿನಿ ಕುಂದಾಪುರದ ಹಟ್ಟಿಕುದುರುವಿನವರು.