ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಸಿರು ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆಯುವ ೧೪ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ಹಾಗೂ ಎ.ಎಸ್.ಎನ್ ಹೆಬ್ಬಾರ್ ಅವರು ಚೇತನ ಫ್ರೌಡ ಶಾಲೆ ಹಂಗಾರಕಟ್ಟೆಯಲ್ಲಿ ಅನಾವರಣಗೊಳಿಸಿದರು.
ಅನಾವರಣ ಮಾಡಿದ ಸಾಹಿತಿ ಎ.ಎಸ್.ಎನ್ ಹೆಬ್ಬಾರ್‌ರವರು ಐರೋಡಿ ಗ್ರಾಮದ ಸಾಧಕರನ್ನು ಸ್ಮರಿಸಿ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ಅವರು ಕನ್ನಡ ಸಾಹಿತ್ಯ ಹಾದಿಗಳ ಪಲ್ಲಟಗಳ ಬಗ್ಗೆ ವಿವರಿಸಿದರು.
ಚೇತನಾ ಫ್ರೌಡ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಭರತ್ ಕುಮಾರ್ ಶೆಟ್ಟಿ ಹಾಗೂ ಕಾರ್ಯದರ್ಶಿ ಇಬ್ರಾಹೀಂ ಸಾಹೇಬ್ ಹಂಗಾರಕಟ್ಟೆ, ರೋಟರಿ ಮುಂದಿನ ವರುಷದ ನಿಯೋಜಿತ ಅಧ್ಯಕ್ಷರಾದ ರೊ.ರಾಜಾರಾಮ ಭಟ್, ಚೇತನಾ ಫ್ರೌಡಶಾಲೆಯ ಮುಖ್ಯೋಪಾಧ್ಯಯರಾದ ಗಣೇಶ್ ಜಿ, ಬಿ.ಡಿ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ, ವಿವಿಧ ತಾಲೂಕಿನ ಕ.ಸಾ.ಪ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ವಹಿಸಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷ ನಾರಾಯಣ ಮಡಿ ವಂದಿಸಿ, ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.