ಕುಂದಾಪುರ ಉಪವಿಭಾಗದ 65ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎ.13ರಿಂದಲೇ ಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್ ಹೊರತಾಗಿಯು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ-ಮಾರುಕಟ್ಟೆಗೆ ಜನರು ತೆರಳುತ್ತಿರುವುದನ್ನು ತಡೆಯುವ ಸಲುವಾಗಿ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೇ ದಿನಬಳಕೆಯ ಸಾಮಾಗ್ರಿಗಳನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಎಪ್ರಿಲ್ 13ರ ಸೋಮವಾರದಿಂದಲೇ ಜಾರಿಗೆ ತರಲಾಗುತ್ತಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋಟ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇಓ, ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಪ್ರತಿ ವಾರ್ಡಿನ ಒಬ್ಬರು ಸದಸ್ಯರನ್ನೊಳಗೊಂಡ ಕೋವಿಡ್ -19 ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು (ತರಕಾರಿ & ದಿನಸಿ) ತಲುಪಿಸಲಾಗುತ್ತದೆ.
ಹೋಮ್ ಡೆಲಿವರಿ ಹೇಗೆ?
ಎಲ್ಲಾ 65 ಗ್ರಾಮ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳಲ್ಲಿ ಕೋವಿಡ್ -19 ಟಾಸ್ಕ್ ಪೋರ್ಸ್‌ನ ಇಬ್ಬರು ಸದಸ್ಯರು ಕಾರ್ಯನಿರ್ವಹಿಸಿಲಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಒಂದು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ತರಕಾರಿ ಹಾಗೂ ದಿನಸಿ ವಸ್ತುಗಳ ಅಗತ್ಯವಿದ್ದರೆ ವಾರ್ಡ್ ಸದಸ್ಯರಿಗೆ ಕರೆ ಮಾಡಿದರೆ (ಮೊಬೈಲ್ ನಂಬರ್ ಪಟ್ಟಿ ಕೆಳಗಿದೆ) ಅವರೇ ನಿಮ್ಮ ಮನೆಗೆ ಅವುಗಳನ್ನು ತಲುಪಿಸಿ, ಹಣ ತೆಗೆದುಕೊಳ್ಳಲಿದ್ದಾರೆ. ಕನಿಷ್ಠ ಒಂದು ವಾರಕ್ಕೆ ಆಗುವಷ್ಟು ದಿನಬಳಕೆಯ ವಸ್ತುಗಳನ್ನು ಒಂದೇ ಭಾರಿಗೆ ತರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಅಮಾಸೆಬೈಲು, ಗಂಗೊಳ್ಳಿ, ಕುಂದಾಪುರ, ಕುಂದಾಪುರ ಗ್ರಾಮಾಂತರ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಕುಂದಾಪುರ ಪುರಸಭೆ ಹೊರತುಪಡಿಸಿ ಉಳಿದೆಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಎಪ್ರಿಲ್ 13ರಿಂದಲೇ ಆರಂಭಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮನೆಯಿಂದ ಹೊರಬಾರದಂತೆ ಜನರಿಗೆ ಅರಿವು:
ದಿನಬಳಕೆಯ ವಸ್ತುಗಳನ್ನು ಖರೀದಿಸುವ ಕಾರಣ ನೀಡಿ ಜನರು ಮನೆಯಿಂದ ಹೊರಬರುತ್ತಿದ್ದು, ಹೋಮ್ ಡೆಲಿವರಿ ಯೋಜನೆ ಮೂಲಕ ಅವರ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಿದರೆ ಜನದಟ್ಟಣೆ ತಗ್ಗಿಸಬಹುದೆಂಬ ಯೋಜನೆಯೊಂದಿಗೆ ಕೋವಿಡ್ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸಲಿದೆ. ಮನೆಗಳಿಗೆ ದಿನಸಿ ವಿತರಿಸುವ ಹೊರತಾಗಿಯೂ ಎಂದಿನಂತೆ ಬೆಳಿಗ್ಗೆ 7 ರಿಂದ 11ರ ತನಕವೂ ದಿನಸಿ, ತರಕಾರಿ ಅಂಗಡಿ, ಬೇಕರಿಗಳು ತೆರೆದಿರಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಎಎಸ್ಪಿ ಹರಿರಾಂ ಶಂಕರ್ ಅವರ ನೇತೃತ್ವದ ಪೊಲೀಸ್ ಪಡೆ ಮೊದಲು ಮೂರು ದಿನಗಳ ಕಾಲ ಮನೆಯಿಂದ ಹೊರಬರುವ ಜನರಿಗೆ ಅಗತ್ಯ ವಸ್ತುಗಳನ್ನು ಮನೆಗೇ ವಿತರಿಸುವ ಬಗ್ಗೆ ಅರಿವು ಮೂಡಿಸಿ, ಆ ಬಳಿಕ ಕಟ್ಟುನಿಟ್ಟಾಗಿ ಜಾರಿಗೆ ತರಲು ನೆರವಾಗಲಿದೆ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಈಗಾಗಲೇ ಸೀಜ್ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ. ಆಸ್ಪತ್ರೆ ಹಾಗೂ ಮೆಡಿಕಲ್‌ಗಳಿಗೆ ತೆರಳುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಕುಂದಾಪುರ ಪುರಸಭೆಗೆ ಅನ್ವಯವಾಗುವುದಿಲ್ಲ:
ಈ ಯೋಜನೆ ಮೊದಲು ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಆ ಬಳಿಕ ಅಗತ್ಯವಿದ್ದರೇ ಮಾತ್ರ ಪುರಸಭಾ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಪುರಸಭಾ ವ್ಯಾಪ್ತಿಯ ನಾಗರಿಕರು ಎಂದಿನಂತೆ ಬೆಳಿಗ್ಗೆ 7ರಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಗೊಂದಲ ಬೇಡ. ಕುಂದಾಪುರ ಉಪವಿಭಾಗದಲ್ಲಿ ಸೀಲ್‌ಡೌನ್ ಇರಲ್ಲ. – https://kundapraa.com/?p=36943 .
ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್‌ವಾರು ಸದಸ್ಯರ ಸಂಪರ್ಕ ಈ ಕೆಳಗಿದೆ.