ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ, ಆಶಾ ಕಾರ್ಯಕರ್ತರು ಬೀದಿಯಲ್ಲಿದ್ದಾರೆ. ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡುಬಿಸಿಲಿನಲ್ಲಿಯೂ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಶ್ಲಾಘನೀಯವಾದುದು. ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರ ಆಶಯದಂತೆ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಎಸ್.ಸಿ.ಡಿ.ಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಹೇಳಿದರು.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜು ದೇವಾಡಿಗ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ ಶಾಖಾ ಪ್ರಬಂಧಕ ರಾಘವೇಂದ್ರ ಉಡುಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಬನಾಜ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮೇಲ್ವಿಚಾರಕ ಶಿವರಾಮ ಪೂಜಾರಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಿಬ್ಬಂದಿಗಳು, ನವೋದಯ ಪ್ರೇರಕರು ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ೨೭ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಆಶಾ ಕಾರ್ಯಕರ್ತೆ ಕಲ್ಪನಾ ಶೇರುಗಾರ್ ವಂದಿಸಿದರು.