ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಂಬಯಿನಿಂದ ಮಂಡ್ಯಕ್ಕೆ ಸರಕು ಸಾಗಾಟ ವಾಹನದಲ್ಲಿ ತೆರಳಿದ್ದ ವ್ಯಕ್ತಿಗೆ ಕೋವಿಡ್ 19 ಸೋಂಕು ತಗಲಿರುವುದು ಪತ್ತೆಯಾಗಿದೆ. ಆತ ತ್ರಾಸಿಯ ಪೆಟ್ರೋಲ್ ಬಂಕ್ನಲ್ಲಿ ಸ್ನಾನ ಮಾಡಿದ್ದೆ ಎನ್ನುವ ಮಾಹಿತಿ ಹಂಚಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತ್ರಾಸಿಯ ಪೆಟ್ರೋಲ್ ಬಂಕ್ನಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು, ಈವರೆಗಿನ ತನಿಕೆಯಲ್ಲಿ ಅದು ದೃಢಪಟ್ಟಿಲ್ಲ.
ಬಂಕಿನಲ್ಲಿದ್ದ ಸಿಸಿ ಟಿವಿ ಪರಿಶೀಲನೆ:
ಮುಂಬೈಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಸರಕು ಸಾಗಾಟ ವಾಹನದಲ್ಲಿ ಎ.20ರಂದು ಮಂಬೈನಿಂದ ಹೊರಟು ಎ. 21 ರಂದು ತ್ರಾಸಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ವಾಹನ ನಿಲ್ಲಿಸಿದ್ದಾಗ ಅಲ್ಲಿ ಸ್ನಾನ ಮಾಡಿ, ಅಲ್ಲಿಯೇ ಸಮೀಪ ಊಟ ಮಾಡಿ ಹೋಗಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಲಾರಿ ಎ. 21ರ ಸಂಜೆ 4:55ಕ್ಕೆ ಶಿರೂರು ಟೋಲ್‌ಗೇಟ್, 5:19ಕ್ಕೆ ತ್ರಾಸಿ ಪೆಟ್ರೋಲ್ ಬಂಕ್ ಎದುರು ಪಾಸಾಗಿದ್ದು, ಬೆಳಿಗ್ಗೆ 3 ಗಂಟೆ ಸುಮಾರಿಗೆ ಸಾಸ್ತಾನ ಟೋಲ್ ಪಾಸ್ ಆಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ ಹಾಗೂ ಬೈಂದೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರೇಮಾನಂದ್ ನೇತೃತ್ವದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸೋಮವಾರ ರಾತ್ರಿಯವರೆಗಿನ ತನಿಕೆಯಲ್ಲಿ ಆ ವ್ಯಕ್ತಿ ತ್ರಾಸಿ ಪೆಟ್ರೋಲ್ ಬಂಕಿಗೆ ತೆರಳಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕುಂದಾಪುರದ ಬಳಿಕ ಬೇರೆ ಪೆಟ್ರೋಲ್ ಬಂಕಿಗೆ ತೆರಳಿರುವ ಶಂಕೆಯಿದ್ದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂಧಿಗಳು ತನಿಕೆ ಮುಂದುವರಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬೈಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಲಾರಿಯಲ್ಲಿ ತೆರಳಿದ್ದ ವ್ಯಕ್ತಿಯ ಗಂಟಲು ದ್ರವವನ್ನು ಎ. 24ರಂದು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿತ್ತು. ಆ ವ್ಯಕ್ತಿ ಅಕ್ರಮವಾಗಿ ಬಂದಿದ್ದು ಮೂವರ ಸಂಪರ್ಕದಲ್ಲಿದ್ದರು. ಇವರಲ್ಲಿ ಕೆಲವರು ಹಾಸನ ಜಿಲ್ಲೆಗೂ, ಕೆಲವರು ಮಂಡ್ಯ ಜಿಲ್ಲೆಗೂ ಸೇರಿದವರಾದ ಕಾರಣ ಎರಡೂ ಜಿಲ್ಲೆಗಳಲ್ಲಿ ನಿಗಾ ವಹಿಸಲಾಗುತ್ತಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್: ಒಟ್ಟು 14 ಮಂದಿಗೆ ಕ್ವಾರಂಟೈನ್ – https://kundapraa.com/?p=37169 .