ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೊನಾ ಸೋಂಕು ವಿರುದ್ಧ ಹೋರಾಡುತ್ತಿರುವ ವಾರಿಯರ‍್ಸ್ ಸೇವೆಗೆ ಕಿರಿಮಂಜೇಶ್ವರದ ನಿವೃತ್ತ ಶಿಕ್ಷಕ ಕೆ. ಸದಾಶಿವ ಶ್ಯಾನುಭಾಗ್ ತಮ್ಮ ಒಂದು ತಿಂಗಳ ಪಿಂಚಣಿ ತೆಗೆದಿರಿಸಿದ್ದಾರೆ. ವಿವಿಧ ಸಂಘಟನೆಗಳು, ದಾನಿಗಳು ಅವರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸುತ್ತಿದ್ದರೆ, ಶ್ಯಾನುಭಾಗರು ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಗೆ ನೀರಿನ ಬಾಟಲಿ ಮತ್ತು ಬಿಸ್ಕಿಟ್ ಕೊಡುತ್ತಿದ್ದಾರೆ. ಬೇಸಿಗೆಯ ಕಡು ಬಿಸಿಲಿನಲ್ಲಿ ಕರ್ತವ್ಯದ ನಿಮಿತ್ತ ಸುತ್ತಾಡಬೇಕಾಗಿರುವ ಅವರಿಗೆ ಈ ವಸ್ತುಗಳ ಅಗತ್ಯ ಹೆಚ್ಚಾಗಿದೆ ಎನ್ನುವುದು ಅವರ ನಿಲುವು.
ಹತ್ತು ದಿನಗಳ ಹಿಂದೆ ವಾರಾವಧಿಗಾಗುವ ಮೊದಲ ಕಂತಿನ ವಸ್ತುಗಳನ್ನು ವಿತರಿಸಿದ್ದ ಅವರು ಎರಡು ದಿನಗಳ ಹಿಂದೆ ಎರಡನೆ ಕಂತಿನ ವಿತರಣೆ ನಡೆಸಿದರು. ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ನಿಶಾ ಜೇಮ್ಸ್ ಮತ್ತು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಂಗೀತಾ ಅವುಗಳನ್ನು ಸ್ವೀಕರಿಸಿ, ಶ್ಯಾನುಭಾಗರಿಗೆ ಕೃತಜ್ಞತೆ ಸಲ್ಲಿಸಿದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ, ಸಾಮಾಜಿಕ ಕಾರ್ಯಕರ್ತ ರತನ್ ಬಿಜೂರು ಇದ್ದರು.
ಸದಾಶಿವ ಶ್ಯಾನುಭಾಗ್ ತಮ್ಮದೇ ಶೈಲಿಯ ಸೇವಾಕ್ರಮಗಳಿಂದ ವಿಶಿಷ್ಟತೆ ಮೆರೆಯುವವರು. ಸಮುದಾಯದ ಸಮಾರಂಭಗಳಲ್ಲಿ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಧಾನ ಪರಿಚಾರಕರಾಗಿ ದುಡಿಯುತ್ತಾರೆ. ಅತಿಥಿಗಳನ್ನು ವೈಯಕ್ತಿಕ ನೆಲೆಯಲ್ಲಿ ಗೌರವಿಸುತ್ತಾರೆ. ಪ್ರತಿವರ್ಷ ಇಲಾಖೆ ನಡೆಸುವ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸುವ ಶಿಕ್ಷಕರಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿ ಗುರುಗಳನ್ನು ಆಯ್ಕೆ ಮಾಡಿ ಅವರನ್ನು ವಿಶೇಷವಾಗಿ ಸನ್ಮಾನಿಸುತ್ತಾರೆ. ಈಗ ತಮ್ಮ ವ್ಯಾಪ್ತಿಯ ಕೊರೊನಾ ವಾರಿಯರ‍್ಸ್‌ಗೆ ತಮ್ಮ ಪಾಲಿನ ಸೇವೆ ನೀಡುತ್ತಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/