ಕುಂದಾಪ್ರ ಡಾಟ್ ಕಾಂ.
ಕುಂದಾಪುರ: ಕಳೆದ ಒಂದೂವರೆ ತಿಂಗಳುಗಳಿಂದ ಕೆಲಸವಿಲ್ಲದೇ, ವ್ಯವಹಾರವಿಲ್ಲದೇ ಹೋಟೆಲ್ ಕಾರ್ಮಿಕರು ಹಾಗೂ ಮಾಲಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಕಾರ್ಮಿಕರು, ಮಾಲಿಕರಿಗೆ ಸರಕಾರ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರ ಸ್ಪಂದಿಸಬೇಕಿದೆ ಎಂದು ಹೋಟೆಲ್ ಉದ್ಯಮಿ ಚಂದ್ರಶೇಖರ ಶೆಟ್ಟಿ ತಮ್ಮ ಹೋಟೇಲ್ ಉದ್ಯಮದ ನೋವನ್ನು ಹೇಳಿಕೊಂಡಿದ್ದಾರೆ.
ಹೋಟೆಲ್ ಮಾಲಿಕರು, ಕಾರ್ಮಿಕರಿಗೆ ಯಾವುದೇ ಆರ್ಥಿಕ, ಸಾಮಾಜಿಕ ಭದ್ರತೆ ಇಲ್ಲ. ಹೋಟೆಲ್ ಮಾಡಿ ಕೋಟೆಗಟ್ಟಲೆ ಕಳೆದುಕೊಂಡರೂ ಕೇಳುವವರಿಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡರೆ, ಮಾಲಿಕರು ಸಂಬಳ ಕೊಡದಿದ್ದರೇ, ಕೆಲಸ ಮಾಡುವಾಗ ಅಪಘಾತ ಸಂಭವಿಸಿದರೆ, ಕಾರ್ಮಿಕ ಮೃತಪಟ್ಟರೆ ಕೇಳುವವರೆ ಇಲ್ಲದಾಗಿದೆ.
ಹೋಟೆಲ್ ಕಾರ್ಮಿಕರಿಗೆ ಯಾವುದೇ ಗುರುತಿನ ಚೀಟಿ ಕೊಡಲಾಗಿಲ್ಲ. ಸರಕಾರದ ಯಾವುದಾದರೂ ಯೋಜನೆ ಬಂದರೂ ಅಲ್ಲಿ ಕೆಲಸ ಮಾಡುವರಿಗೆ ನಾನೊಬ್ಬ ಕಾರ್ಮಿಕ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಐಡಿ ಕಾರ್ಡ್ ಒದಗಿಸುವಲ್ಲಿ ಹೋಟೆಲ್ ಅಸೋಸಿಯೇಷನ್ ಹಾಗೂ ಸರಕಾರದಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಹೋಟೆಲ್ ಕಾರ್ಮಿಕರು ಮತ್ತು ಮಾಲಿಕರ ನೆರವಿದೆ ಸರಕಾರ ಧಾವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೋಟೆಲ್ ಕಾರ್ಮಿಕರಿಗೆ ಸರಿಯಾದ ಪರಿಹಾರ ದೊರೆಯದೇ ಹೋದರೆ ಹೋಟೆಲ್ ಮಾಲಿಕರು ಹಾಗೂ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಬೇಕಾದ ಸಂದರ್ಭ ಎದುರಾಗಲಿದೆ ಎಂದವರು ಎಚ್ಚರಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ/