ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬಯಿ, ಜು.23: ಮುಂಬಯಿಯ ನಗರದ ಪ್ರಸಿದ್ಧ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ನಿರ್ದೇಶಕ, ಕೋಟಕ್ ಮಹೀಂದ್ರ ಬ್ಯಾಂಕ್‌ನ ಮಾಜಿ ಉದ್ಯೋಗಿ, ಮುಂಬಯಿ ತುಳುಕನ್ನಡಿಗರ ಅನರ್ಘ್ಯ ರತ್ನ ಎಂದೇ ಚಿರಪರಿಚಿತ ರಾಜು ಶ್ರೀಯಾನ್ ನಾವುಂದ (51) ಸಯಾನ್ ಚುನಾಭಟ್ಟಿ ಇಲ್ಲಿನ ತಿರುಪತಿ ಹೈಟ್ಸ್ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ತೀವ್ರ ಹೃದಯಘಾತದಿಂದ ವಿಧಿವಶರಾದರು.
ಬೈಂದೂರು ತಾಲೂಕು ನಾವುಂದ ಮಂಕಿ ಮನೆ ನಿವಾಸಿ ಶ್ರೀಯಾನ್ ಮುಂಬಯಿನಲ್ಲಿ ಅಪಾರ ಸಮಾಜಪರ ಚಿಂತಕರಾಗಿ, ಅನನ್ಯ ಕಲಾಪ್ರೇಮಿ, ಕಲಾಪೋಷಕರಾಗಿ ಪ್ರಸಿದ್ಧರೆನಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ಕರ್ನಾಟಕ ಸಂಘ ಮುಂಬಯಿ ಸಂಸ್ಥೆಗಳಲ್ಲಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ (ಮುಂಬಯಿ), ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮತ್ತಿತರ ಹತ್ತಾರು ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಸಕ್ರಿಯ ಸೇವಾಕರ್ತರಾಗಿ ಶ್ರಮಿಸಿದ್ದರು. ನಾಡೋಜ ಜಿ.ಶಂಕರ್ ಉಡುಪಿ ಇವರ ಪರಮಾಪ್ತರಾಗಿದ್ದ ಶ್ರೀಯಾನ್ ಓರ್ವ ಸ್ನೇಹಜೀವಿಯಾಗಿ ಹೆಸರಾಂತ ಯುವ ಸಮಾಜ ಸೇವಕ, ಕಲಾ ಸಂಘಟಕರಾಗಿ ಮುಂಬಯಿ ತುಳುಕನ್ನಡಿಗರ ಅನರ್ಘ್ಯ ರತ್ನ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ (ಅರುಣೋದಯ ಕಲಾ ನಿಕೇತನ ಇದರ ನಿರ್ದೇಶಕಿ) ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್, ಇಬ್ಬರು ಪುತ್ರರು ಸೇರಿದಂತೆ ಅಪಾರ ಕಲಾವಿದ ಬಳಗ, ಬಂಧು ಮಿತ್ರರನ್ನು ಅಗಲಿದ್ದಾರೆ.