ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಮಾರಸ್ವಾಮಿಯ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಸಮುದ್ರದಲ್ಲಿ ಬುಧವಾರ ಮಧ್ಯಾಹ್ನ ಮೀನುಗಾರಿಕೆ ನಡೆಸುತ್ತಿದ್ದ ಒಂಟಿದೋಣಿ (ಡಿಂಗಿ) ಅಲೆಗಳಿಗೆ ಸಿಲುಕಿ ಮಗುಚಿಕೊಂಡಿದೆ. ದೋಣಿಯಲ್ಲಿದ್ದ ನಾಲ್ವರು ಈಜಿ ಹತ್ತಿರದ ದೋಣಿಗಳನ್ನೇರಿ ಪಾರಾದರು.
ಗಂಗೊಳ್ಳಿಯ ಗುಡ್ಡೆಕೇರಿ ಶ್ರೀನಿವಾಸ ಖಾರ್ವಿ ಅವರಿಗೆ ಸೇರಿದ ಆದಿ ಆಂಜನೇಯ ಹೆಸರಿನ ಎರಡು ಎಂಜಿನ್‌ಗಳ ದೋಣಿಯಲ್ಲಿ ಗಂಗೊಳ್ಳಿಯ ಸುಬ್ಬ ಖಾರ್ವಿ ಮಗ ರಾಮ ಖಾರ್ವಿ, ಶೇಷ ಖಾರ್ವಿ ಅವರ ಮಗ ಶಂಕರ ಖಾರ್ವಿ, ನಾರಾಯಣ ಖಾರ್ವಿ ಅವರ ಮಗ ಕೃಷ್ಣ ಖಾರ್ವಿ ಮತ್ತು ಕುಂದಾಪುರ ಕೋಡಿಯ ಲಕ್ಷ್ಮಣ ಖಾರ್ವಿ ಅವರ ಮಗ ಸುಭಾಸ್ ಖಾರ್ವಿ ಬಲೆಬಿಟ್ಟು ಮೀನು ಹಿಡಿಯುತ್ತಿದ್ದಾಗ ಘಟನೆ ನಡೆದಿದೆ. ದೋಣಿ ಒಡೆದು ನಿಷ್ಪ್ರಯೋಜಕ ಆಗಿದೆ. 10 ಅಶ್ವಶಕ್ತಿಯ ಎರಡು ಯಮಾಹ ಔಟ್‌ಬೋರ್ಡ್ ಎಂಜಿನ್ ಮತ್ತು ಬಲೆ ಸಮದ್ರ ಸೇರಿವೆ. ಒಟ್ಟು ರೂ 10 ಲಕ್ಷ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ದಡಕ್ಕೆ ತೇಲಿಬಂದ ದೋಣಿಯ ಅವಶೇಷವನ್ನು ಮೇಲೆತ್ತುವ ಸಂದರ್ಭ ದೋಣಿಯ ಮಾಲಕ ಶ್ರೀನಿವಾಸ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್ ಮತ್ತು ಸಿಬ್ಬಂದಿ ಬಂದು ಪರಿಶೀಲಿಸಿದ್ದಾರೆ.










