ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾವ್ರಾಡಿ ಮುಳ್ಳುಗುಡ್ಡೆ, ಬಸ್ರೂರು ಮತ್ತು ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹದ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರ ತಾಲೂಕು ಮಂಕಿ ನಿವಾಸಿ ವಿಲ್ಸನ್ ಪಿಯಾದಾಸ್ ಲೋಪಿಸ್ (29) ಮತ್ತು ತೆಕ್ಕಟ್ಟೆ ನಿವಾಸಿ ಗಂಗಾಧರ (40) ಬಂಧಿತ ಆರೋಪಿಗಳು.
2019 ಮೇ ತಿಂಗಳಿನಲ್ಲಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯಲ್ಲಿರುವ ನಾಗರಾಜ್ ಅವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಮಾಡಿನ ಹಂಚನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಕಪಾಟನ್ನು ಒಡೆದು ಮನೆಯೊಳಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣ, ಇಸ್ತ್ರಿಪೆಟ್ಟಿಗೆ ನಗದು ಸೇರಿ ಒಟ್ಟು 64,900 ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದರು. 2019 ಜೂನ್ ತಿಂಗಳಿನಲ್ಲಿ ಬಸ್ರೂರು ಗ್ರಾಮದ ಕೊಳ್ಕೇರಿ ಮಹಾಲಿಂಗ ಹಾಗೂ ಅವರ ಹೆಂಡತಿ ಮಕ್ಕಳು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಮಾಡಿನ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ಮನೆಯ ಗೋದ್ರೇಜ್ ನಲ್ಲಿ ಇರಿಸಿದ ನಗದು ಚಿನ್ನದ ಕರಿಮಣಿ ಸರ, ಬೆಂಡೋಲೆ, ಚಿನ್ನದ ಮೂಗು ಬೊಟ್ಟು, ಚಿನ್ನದ ಓಲೆ ಸಹಿತ ಸುಮಾರು 2 ಲಕ್ಷ ಮೌಲ್ಯದ ನಗದು & ಚಿನ್ನಾಭರಣಗಳು ಕಳವು ಮಾಡಿದ್ದರು .2019 ನವೆಂಬರ್ ತಿಂಗಳಿನಲ್ಲಿ ಕುಂದಾಪುರ ರೈಲ್ವೆಸ್ಟೇಶನ್ ವಸತಿಗೃಹದಲ್ಲಿ ವಾಸವಿದ್ದ ಟ್ರಾಕ್ ಮನ್ ಸುಬ್ಬ ದೇವಾಡಿಗ ಎನ್ನುವರ ವಸತಿ ಗೃಹಕ್ಕೆ ರಾತ್ರಿ ಬೀಗ ಹಾಕಿ ಹೋಗಿದ್ದ ಸಮಯದಲ್ಲಿ ಮನೆಯ ಬೀಗ ಮುರಿದು ವಸತಿ ಗೃಹದೊಳಗೆ ಗೋದ್ರೇಜಿನಲ್ಲಿದ್ದ ನಗದು ಹಾಗೂ ಚಿನ್ನಾ ಭರಣಗಳು ಕಳವು ಮಾಡಿದ್ದರು. ಈ ಮೂರು ಘಟನೆ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸ್ರೂರು ಮೇರ್ಡಿ ಹಾಗೂ ಕಟ್ಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡಿದ್ದ ಆರೋಪಿ ವಿಲ್ಸನ್ ಮೂಲತಃ ಮಂಕಿಯವನಾಗಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಗಂಗಾಧರನಿಗೆ ನೀಡುತ್ತಿದ್ದ. ಗಂಗಾಧರ ಕಳವು ಮಾಡಿರುವ ಚಿನ್ನಾಭರಣಗಳನ್ನು ಕೋಟೇಶ್ವರ ಮತ್ತು ಕುಂದಾಪುರದ ಸೊಸೈಟಿಗಳಲ್ಲಿ ಅಡವು ಇಟ್ಟು ಹಣ ಪಡೆದುಕೊಂಡು ಹಂಚಿಕೊಳ್ಳುತ್ತಿದ್ದರು. ಆರೋಪಿ ವಿಲ್ಸನ್ ಲೋಪಿಸ್ ಭಟ್ಕಳ ಗ್ರಾಮಾಂತರ ಠಾಣೆ, ಹಾಗೂ ಮಂಕಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೂಡ ಮನೆ ಕಳವು ನಡೆಸಿ ಜೈಲಿಗೆ ಹೋಗಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.
ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು ಅವರಿಂದ ಸುಮಾರು 64.760 ಗ್ರಾಂ ಚಿನ್ನ ಹಾಗೂ 112 ಗ್ರಾಂ ಬೆಳ್ಳಿ ಆಭರಣಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ಅವರು ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಆರೋಪಿ ವಿಲ್ಸನ್ ರೈಲ್ವೇ ನಿಲ್ದಾಣದ ಬಳಿ ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ಹಾಗೂ ಆರೋಪಿಯ ಗಂಗಾಧರ ಸೊಸೈಟಿಯಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪಿಎಸ್ಐ ರಾಜಕುಮಾರ್, ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ಶ್ರೀಧರ ನಾಯ್ಕ್, ಕುಂದಾಪುರ ನಗರ ಠಾಣಾ ಪಿಎಸ್ಐ ಸದಾಶಿವ ಹಾಗೂ ಕುಂದಾಪುರ ಗ್ರಾಮಾಂತರ ಠಾಣೆ ಸಿಬ್ಬಂದಿಗಳಾದ ಸತೀಶ್ , ಅನಿಲ್, ಕುಂದಾಪುರ ಠಾಣಾ ಸಿಬ್ಬಂದಿಗಳಾದ ಮಂಜುನಾಥ, ಸಂತೋಷ ಮತ್ತು ವೃತ್ತ ಕಚೇರಿಯ ಸಿಬ್ಬಂದಿಗಳಾದ ಸೀತಾರಾಮ, ವಿಕ್ಟರ್ , ಗುರುರಾಜ್, ಉದಯ, ಚಾಲಕರಾದ ರವೀಂದ್ರ, ಸುರೇಶ್ ಹಾಗೂ ಸಿಡಿಆರ್ ವಿಭಾಗದ ಶಿವಾನಂದ ಮೊದಲಾದವರು ಪಾಲ್ಗೊಂಡಿದ್ದರು.