ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸರ್ಕಾರ ಪ್ರತಿ ವರ್ಷ ಉತ್ತಮವಾಗಿ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕುಂದಾಪುರ ತಾಲೂಕಿನ ಹೊಂಬಾಡಿ – ಮಂಡಾಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. 2019-20ನೇ ವರ್ಷದಲ್ಲಿ ಸಾಧಿಸಿದ ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತಾ ಯೋಜನೆಗಳ ವಿವಿಧ ಮಾನದಂಡಗಳನ್ನು ಪರಿಗಣಿಸಲಾಗಿದೆ.
ಹೊಂಬಾಡಿ – ಮಂಡಾಡಿ ಗ್ರಾಮ ಪಂಚಾಯಿತಿಯಲ್ಲಿ ಶೇ 99 ರಷ್ಟು ಸಾಕ್ಷಾರತಾ ಪ್ರಮಾಣ ದಾಖಲಾಗಿದೆ. ಕಾಳಾವರ ಹಾಗೂ ಕೂರ್ಗಿ ಗ್ರಾಮಗಳ ತ್ಯಾಜ್ಯವನ್ನು ಸಂಗ್ರಹಿಸಿ ಹೊಂಬಾಡಿಯಲ್ಲಿರುವ ತಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತ್ಯೇಕಗೊಳಿಸಲಾಗುತ್ತಿದಿದೆ. ಇದಕ್ಕಾಗಿ 60 ಸಾವಿರ ರೂ. ವೆಚ್ಚ ಮಾಡಲಾಗಿದ್ದು 6 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಗೆ 4ನೇ ಸ್ಥಾನವನ್ನು ಪಡೆದುಕೊಂಡಿದ್ದು ಪಂಚಾಯಿತಿ ಕಟ್ಟಡ, ಸಭಾ ಭವನ ಅಂಗನವಾಡಿ ಕಟ್ಟಡ ಹಾಗೂ ಆಯ್ದ ರಸ್ತೆಗಳ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. 29 ಬಾವಿ, 26 ಮಳೆ ನೀರು ಸಂಗ್ರಹ ಘಟಕಗಳನ್ನು ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ದೊರಕಿರುವ ೨೦ ಲಕ್ಷ ಅನುದಾನವನ್ನು ಬಳಸಿಕೊಂಡು ಬಾವಿ ನಿರ್ಮಿಸಿ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ನೀರಿನ ಬಿಲ್, ಮನೆ ತೆರಿಗೆ ವಾಣಿಜ್ಯ ಕಟ್ಟಡ ತೆರಿಗೆ ಶೇ 100 ತೆರಿಗೆ ವಸೂಲಿಯ ಸಾಧನೆಗೆ ಗ್ರಾಮ ಪಂಚಾಯಿತಿ ಪಾತ್ರವಾಗಿದೆ.
ಇದನ್ನೂ ಓದಿ:
► ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಹತೆ ಪಡೆದ ಮರವಂತೆ ಗ್ರಾಮ ಪಂಚಾಯಿತಿ – https://kundapraa.com/?p=41439 .