ಕುಂದಾಪುರ: ಭಾರಿ ಮಳೆಯ ಹಿನ್ನೆಲೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರೀ ಅನಾಹುತ ಸಂಭವಿಸಿದ್ದು ಅಪಾರ ಪ್ರಮಾಣದ ಕಷಿ ಹಾನಿ ಉಂಟಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವಾರಾಹಿ ಎಡದಂಡೆ ಕಾಲುವೆಯ ಅಕ್ಸಾಲಿಕೊಡ್ಲು ಎಂಬಲ್ಲಿ ಕಾಲುವೆ ಬುಡದಲ್ಲಿ ಹಾದುಹೋಗುವ (ಅಂಡರ್ ಪ್ಯಾಸೇಜ್) ತೋಡು ಬ್ರೇಕ್ ಆಗಿದ್ದರಿಂದ ಭಾರೀ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು ಆತಂಕ ಸಷ್ಟಿಯಾಗಿದೆ.
ನೀರಿನ ಹೊಡೆತಕ್ಕೆ ಕಾಲುವೆ ಇಕ್ಕೆಲಗಳ ಗುಡ್ಡಜರಿತ ಉಂಟಾಗಿದ್ದರಿಂದ ಕಾಲುವೆ ಮುಚ್ಚಲ್ಪಟ್ಟು ಕಾಲುವೆ ನೀರು, ತೋಡಿನ ನೀರು ಅಂಡರ್ ಪ್ಯಾಸೇಜ್ ಮೂಲಕ ತೋಟ, ಕೃಷಿಭೂಮಿ, ಮನೆಗಳಿಗೆ ನುಗ್ಗಿದ್ದು ಮೊಳಹಳ್ಳಿ ಇಡಿ ಗ್ರಾಮ ಜಲಾವತಗೊಂಡಿದೆ. ಬಾವಿ, ತೋಡಿನ ದಂಡೆ, ಮೋರಿಗಳು ನೀರಿನ ಹೊಡೆತಕ್ಕೆ ಕೊಚ್ಚಿಹೋಗಿದೆ. ಬಾಸಬೈಲು ಎಂಬಲ್ಲಿ ನೂರಾರು ಎಕರೆ ಕೃಷಿ ಭೂಮಿ ಮುಳುಗಿದ್ದು ಜೇಡಿಮಣ್ಣು ಮಿಶ್ರಿತ ನೀರು ಪ್ರಳಯ ಸದಶ್ಯ ವಾತಾವರಣ ನಿರ್ಮಿಸಿದೆ. ಬಾಸಬೈಲುವಿನ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ವಾರಾಹಿ ಎಡದಂಡೆ 23ನೇ ಕಿಮೀ ವ್ಯಾಪ್ತಿಯಲ್ಲಿ ಎಡದಂಡೆಗೆ ಹೊಂದಿಕೊಂಡಿರುವ ಗುಡ್ಡಜರಿತ ಮುಂದುವರಿದಿರುವುದರಿಂದ ತೀವ್ರ ರೀತಿಯ ಅಪಾಯ ಎದುರಾಗಿದೆ. ಗುಡ್ಡಜರಿತದಿಂದ ಕಾಲುವೆ ಧ್ವಂಸಗೊಂಡಿದ್ದು ಕಾಲುವೆಗೆ ಹೊಂದಿಕೊಂಡಿರುವ ಅಕ್ಸಾಲಿಕೊಡ್ಲು-ಮೊಳಹಳ್ಳಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಕಾಲುವೆಗೆ ಹಾಸಲಾದ ಸಿಮೆಂಟ್ ಬೆಡ್‌ಗಳು ಕುಸಿದು ಕಾಲುವೆಗೆ ಬಿದ್ದಿದೆ. 50ಕ್ಕೂ ಹೆಚ್ಚು ಮನೆಗಳು ಅಪಾಯ ಎದುರಿಸುತ್ತಿವೆ.