ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಶ್ರೀಮದ್ ಭಗವದ್ಗೀತೆ ನಮ್ಮ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಅವಿಭಾಜ್ಯ ಅಂಗ’ ಎಂದು ಲೇಖಕ ಉಪ್ಪುಂದ ರಮೇಶ ವೈದ್ಯ ಹೇಳಿದರು.
ಮುಖ್ಯ ಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ರಚಿಸಿದ ‘ಶ್ರೀಮದ್ಭಗವದ್ಗೀತೋಪನಿಷತ್ ಸಾರ, ರಂಗಸಂವಾದ’ ಕೃತಿಯನ್ನು ಬೈಂದೂರು ಸೀತಾರಾಮ ಕಲ್ಯಾಣ ಮಂಟಪದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿಶ್ವೇಶ್ವರ ಅಡಿಗರು ಸಂಕ್ಷೇಪಿಸಿ ಬರೆದ ಕೃತಿಯು ಗೀತಾ ಸಾರ ಸುಲಭಗ್ರಾಹ್ಯ ಮಾಡವಂತಿದೆ. ರಂಗದ ಮೇಲೆ ಪ್ರದರ್ಶಸಲೂ ಸಾಧ್ಯವಾಗುವಂತೆ ಇದರ ರಚನೆ ಇದೆ’ ಎಂದರು. ‘ಚಂಚಲ ಮನಸ್ಸಿನಿಂದ ತೊಳಲಾಡುವ ವ್ಯಕ್ತಿಗಳಿಗೆ ಗೀತೋಪದೇಶದಲ್ಲಿ ಶ್ರೀಕೃಷ್ಣ ನೀಡಿದ ಅಮೂಲ್ಯ ಸಂದೇಶ ಬದುಕಿಗೆ ದಾರಿದೀಪ ಆಗಬಹುದು’ ಎಂದು ಅವರು ಹೇಳಿದರು.
ಜಿಲ್ಲಾ ಶ್ರೀಮದ್ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಕೋವಿಡ್‌ನಿಂದ ಸ್ಥಗಿತಗೊಂಡಿರುವ ಭಗವದ್ಗೀತಾ ಪ್ರಸಾರ ಅಭಿಯಾನ ಮುಂದುವರಿಸುವುದು ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ವಿಜ್, ಪ್ರಬಂಧ, ಶ್ಲೋಕ ಕಂಠಪಾಠ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಅಭಿಯಾನ ಸಮಿತಿಯ ಆನಂದ ಮದ್ದೋಡಿ , ಕೇಶವ ನಾಯ್ಕ್ ಪುಸ್ತಕದ ಲೇಖಕ ಬಿಜೂರು ವಿಶ್ವೇಶ್ವರ ಅಡಿಗ, ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ್, ಮಾತೃಮಂಡಳಿ ಅಧ್ಯಕ್ಷೆ ವನಜಾ ಭಾಸ್ಕರ್ ಇದ್ದರು.










