ಕುಂದಾಪುರ: ಬೈಕ್ ಹಾಗೂ ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಬೈಕ್ ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಸವಾರನಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರಿನಲ್ಲಿ ಇಂದು ಸಂಜೆಯ ವೇಳೆಗೆ ನಡೆದಿದೆ.
ಘಟನೆಯ ವಿವರ:
ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಎಂಬುವವರು ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರು ಕಡೆಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಬ್ರಿಜ್ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ಬಿದ್ದುದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದ ಸಂಪತ್ ಪೂಜಾರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅವರನ್ನು ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ.
ಕೊಲ್ಲೂರು ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಸ್ನೇಹಿತನೊಂದಿಗೆ ಪಾಲುದಾರಿಕೆಯಲ್ಲಿ ಶಾಮಿಯಾನದ ವ್ಯವಹಾರ ನಡೆಸುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸಂಪತ್ ದಿನಸಿ ಅಂಗಡಿಯನ್ನು ಹೊಂದಿದ್ದರೆನ್ನಲಾಗಿದೆ. ಕಳೆದ ವಾರವಷ್ಟೇ ಹೊಸ ಪಲ್ಸರ್ ಬೈಕ್ ಖರೀದಿಸಿದ್ದರು. ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.