ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಬೈಂದೂರು ತಾಲೂಕಿನ ಪಂಚಾಯಿತಿ ಪ್ರಥಮ ಅಧ್ಯಕ್ಷ ಮಹೇಂದ್ರ ಪೂಜಾರಿ ಅಭಿಮಾನಿಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನಿಸಿ ಮಾತನಾಡಿದ ಬಂದರು, ಮೀನುಗಾರಿಕೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕೇಂದ್ರಿತವಾಗಿ ಹೊಸ ತಾಲೂಕು ರಚನೆಯ ಕನಸು ಕೈಗೂಡಿದೆ. ಈಗ ತಾಲ್ಲೂಕಿನ ಅಭಿವೃದ್ಧಿ ಕುರಿತಾಗಿ ಜನರ ನಿರೀಕ್ಷೆಗಳು ಗರಿಗೆದರಿರುವ ಕಾರಣ ಹೊಸತಾಗಿ ಅಸ್ತಿತ್ವ ಪಡೆದಿರುವ ತಾಲ್ಲೂಕು ಪಂಚಾಯಿತಿ ಮತ್ತು ಅದರ ಅಧ್ಯಕ್ಷ, ಸದಸ್ಯರ ಹೊಣೆ ಹೆಚ್ಚಿದೆ ಸ್ವಾತಂತ್ರ್ಯ ಗಳಿಸಿ 74 ವರ್ಷಗಳಾದರೂ ದೇಶದ ಸಂಪೂರ್ಣ ಪ್ರಗತಿ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಸತಿಯಂತಹ ಸಮಸ್ಯೆಗಳಿವೆ. ಕೇವಲ ರಸ್ತೆಗಳ ನಿರ್ಮಾಣ, ದುರಸ್ತಿಯಿಂದ ಅಭಿವೃದ್ದಿ ಆಗುವುದಿಲ್ಲ. ಮೊದಲು ಜನರ ಮೂಲ ಅಗತ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಹುಟ್ಟೂರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪೂಜಾರಿ, ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ. ತಾಲೂಕಿನ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕಾರ್ಯ ನಿರ್ವಹಿಸುತ್ತೇನೆ ಎಂದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಕೆ. ಬಾಬು ಶೆಟ್ಟಿ, ತಾಲೂಕಿನ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪ್ರಣಯಕುಮಾರ ಶೆಟ್ಟಿ, ನಾವುಂದ ಗಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ ಇದ್ದರು.
ಹಿಂಧು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರು. ವೆಂಕಟೇಶ ವಂದಿಸಿದರು. ಮುಖ್ಯೋಪಾಧ್ಯಾಯ ಎ. ಶಿವರಾಮ ನಿರೂಪಿಸಿದರು.