ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕೊಡೇರಿ ಕಿರು ಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆಯಗೆ ಸಂಬಂಧಿಸಿದಂತೆ ಉಪ್ಪುಂದ ಹಾಗೂ ಕೊಡೇರಿ ಭಾಗದ ಮೀನುಗಾರರ ನಡುವೆ ಘರ್ಷಣೆ ತಾರಕಕ್ಕೇರಿ, ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಶನಿವಾರ ನಡೆದಿದೆ.
ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಾಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ಮೀನುಗಾರಿಕಾ ಇಲಾಖೆ ತಾತ್ಕಲಿಕ ಅನುಮತಿ ನೀಡಿತ್ತು, ಉಪ್ಪುಂದ ಭಾಗದ ಸುಮಾರು 100ಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನದ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆಯ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಾಣ ಪ್ರವೇಶಿಸುವಾಗ, ಕೊಡೇರಿ ಭಾಗದ ಮೀನುಗಾರರು ಇಲ್ಲಿನ ಪ್ರಾಂಗಾಣದಲ್ಲಿ ಮೂಲಸೌಕರ್ಯ ಕಲ್ಪಿಸದ ಹಾಗೂ ಕೊಡೇರಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಎಡಮಾವಿನ ಹೊಳೆಯಲ್ಲಿ ಸೇತುವೆ ನಿರ್ಮಾಣ ಮಾಡುವವರೆಗೆ ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ಎಡಮಾವಿನ ಹೊಳೆಯಲ್ಲಿ ಉಪ್ಪುಂದ ಭಾಗದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿಯನ್ನು ಅಡ್ಡಲಾಗಿರಿಸಿ, ಮೀನು ಹರಾಜು ಮಾಡಲು ಪ್ರತಿಭಟಿಸಿದರು.
ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಮಧ್ಯ ಪ್ರವೇಶಿಸಿ, ಎರಡು ಭಾಗದ ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು, ಆದರೆ ನಮ್ಮ ಬೇಡಿಕೆ ಈಡೇರುವ ತನಕ ಮೀನು ಹರಾಜು ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ಕೊಡೇರಿ ಭಾಗದಮೀನುಗಾರರು ಪಟ್ಟುಹಿಡಿದರು.
ಲಾಠಿಚಾರ್ಜ: ಸುಮಾರು ನಾಲ್ಕೈದು ತಾಸುಗಳ ಕಾಲ ಉಪ್ಪುಂದ ಭಾಗದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನುಗಳನ್ನು ಖಾಲಿ ಮಾಡದೆ ನದಿಯಲ್ಲಿ ತಮ್ಮ ದೋಣಿಗಳನ್ನು ನಿಲ್ಲಿಸಿದ್ದರು. ಬಳಿಕ ತಹಶೀಲ್ದಾರ ಬಿ.ಪಿ. ಪೂಜಾರ್ ಭೇಟಿ ನೀಡಿ ಎರಡು ಭಾಗದ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದರು, ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸುಮಾರು 5 ತಾಸಿನವರೆಗೂ ಮೀನು ಹರಾಜಿಗೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ, ಉಪ್ಪುಂದ ಭಾಗದ ಮೀನುಗಾರರು ದೋಣಿಯನ್ನು ಒಮ್ಮೆಲೆ ಮುನ್ನುಗ್ಗಿಸಿ ಅಡ್ಡಲಾಗಿರುವ ಕೊಡೇರಿ ಭಾಗದ ದೋಣಿಯನ್ನು ಭೇದಿಸುವ ಪ್ರಯತ್ನ ಮಾಡಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ತಾರಕಕ್ಕೇರಿ ನದಿಯಲ್ಲಿಯೇ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಅಷ್ಟರಲ್ಲಾಗಲೇ ಸಾವಿರಾರು ಮೀನುಗಾರರು ಸ್ಥಳದಲ್ಲಿ ಸೇರಿದ್ದರು. ಮಧ್ಯೆ ಪ್ರವೇಶಿಸಿದ ಪೋಲೀಸರು ದೋಣಿ ಮೇಲೇರಿ ಲಾಠಿಚಾರ್ಜ್ ನಡೆಸಿದರು.
- ಇಲ್ಲಿ ಬಂದರು ನಿರ್ಮಾಣದ ಸಂದರ್ಭದ ಕೊಡೇರಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಇಲ್ಲಿನ ಎಡಮಾವಿನ ಹೊಳೆಗೆ ಸಂಪರ್ಕ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿರುವುದಲ್ಲದೇ ಕಾಮಗಾರಿಗೂ ಚಾಲನೆ ನೀಡಿದ್ದರು, ಆದರೆ ಏಕಾಏಕಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಶೀಘ್ರ ಸೇತುವೆ ಕಾಮಗಾರಿ ಆರಂಭಿಸಿ ಹಾಗೂ ಬಂದರು ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಿ ಆ ಬಳಿಕ ಇಲ್ಲಿ ಮೀನು ಹರಾಜಿಗೆ ಅವಕಾಶ ಕಲ್ಪಿಸಿಕೊಡಲಾಗುವುದು, ಮೀನುಗಾರಿಕಾ ಇಲಾಖೆ ವಿವಾದಾಸ್ಪದ ಜಾಗದಲ್ಲಿ ತರಾತುರಿಯಲ್ಲಿ ಮೀನು ಹರಾಜಿಗೆ ಅವಕಾಶ ನೀಡುವ ಅಗತ್ಯವಿರಲಿಲ್ಲ – ಶುಕ್ರದಾಸ್ ಖಾರ್ವಿ ಅಧ್ಯಕ್ಷ ಟ್ರಾಲ್ ದೋಣಿ ಸಂಘ ಕೊಡೇರಿ.
- ಕೊಡೇರಿ ಕಿರು ಬಂದರಿನ ಮೀನು ಹರಾಜು ಪ್ರಾಂಗಾಣದಲ್ಲಿ ಮೀನು ಹರಾಜಿಗೆ ಸಂಬಂಧಿಸಿದಂತೆ ನಾವು ಕೊಡೇರಿ ಭಾಗದ ಮೀನುಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವು, ನೀವು ಇಲಾಖೆಯಿಂದ ಲಿಖಿತ ಆದೇಶ ಪ್ರತಿ ತನ್ನಿ ಆ ಬಳಿಕ ಮೀನು ಹರಾಜು ಮಾಡಿ ಎಂದು ತಿಳಿಸಿದ್ದರು. ಅದರಂತೆ ಮೀನುಗಾರಿಕೆ ಇಲಾಖೆ ಷರತ್ತುಬದ್ದವಾಗಿ ತಾತ್ಕಲಿಕವಾಗಿ ಮೀನು ಹರಾಜಿಗೆ ಆದೇಶಿಸಿದ್ದರು, ಆದರೆ ಕೊಡೇರಿ ಭಾಘದ ಮೀನುಗಾರರು ಕೆಲವೊಂದು ಬೇಡಿಕೆ ಮುಂದಿಟ್ಟು ಮೀನು ಹರಾಜಿಗೆ ತಡೆಯೊಡ್ಡುತ್ತಿದ್ದಾರೆ. ಈ ಬಂದರು ಕೇವಲ ಕೊಡೇರಿ ಮಾತ್ರ ಸೀಮಿತವಾಗಿಲ್ಲ ಈ ಎಲ್ಲಾ ಮೀನುಗಾರರಿಗೂ ಅನುಕೂಲವಾಗುವಂತೆ ಬಂದರು ನಿರ್ಮಿಸಲಾಗಿದೆ, ಇಲ್ಲಿನ ಮೂಲಸೌಕರ್ಯದ ಬಗ್ಗೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವ – ವೆಂಕಟರಮಣ ಖಾರ್ವಿ ಅಧ್ಯಕ್ಷರು, ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ.