ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೆಹರು ಯವ ಕೇಂದ್ರ ಉಡುಪಿ ಹಾಗೂ ಸ್ನೇಹ ಮಹಿಳಾ ಮಂಡಲ ರಿ. ಮರವಂತೆ ಇವರ ಸಹಯೋಗದಲ್ಲಿ ಮಹಿಳಾ ಮಂಡಲದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಕೋವಿಡ್- 19 ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಇಲ್ಲಿನ ಮರವಂತೆಯ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಡಶಾಲೆಯ ವಠಾರದಲ್ಲಿ ಜರುಗಿತು.
ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವ ಪದ್ದತಿ ಮೊದಲಿನಿಂದಲೂ ಇದೆ. ಇಂತಹ ಗಂಭೀರ ಸಂಧರ್ಭಗಳಲ್ಲಿ ಅದನ್ನು ಚಾಚು ತಪ್ಪದೆ ಪಾಲಿಸುವುದು ಅಗತ್ಯ. ಕೋವಿಡ್-19ಗೆ ಸೂಕ್ತ ಲಸಿಕೆ ದೊರೆಯುವ ತನಕ ನಿರ್ಲಕ್ಷ ವಹಿಸುವುದು ಸರಿಯಲ್ಲ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಸಂದೇಶಗಳಿಗೆ ಕಿವಿಗೊಡದೇ ಸರಕಾರ ನೀಡಿರುವ ಅಧಿಕೃತ ಮಾಹಿತಿಯನ್ನು ಅನುಸರಿಸಬೇಕು. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದುವುದಲ್ಲದೇ ನಮ್ಮ ಸುತ್ತಮುತ್ತಲಿನವರ ಆರೋಗ್ಯ ಕಾಳಜಿಯೂ ಬಹುಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಮಾತನಾಡಿ, ಸ್ವಚ್ಛತೆಯ ಪಾಲನೆಯ ಅರಿವು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಪ್ರತಿಯಬ್ಬರಿಗೂ ಇರಬೇಕಿದ್ದು ನಾವು ಸರಿಯಾದ ಹೆಜ್ಜೆ ಇರಿಸಿದರೆ ಸಮಾಜವೂ ಸರಿದಾರಿಯಲ್ಲಿ ಸಾಗಲಿದೆ ಎಂದರು.
ಮರವಂತೆಯ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ವಿಘ್ನೇಶ್ವರ ಭಟ್, ಮರವಂತೆ ಹಳೆ ವಿದ್ಯಾರ್ಥಿ ಸಂಘದ ರವಿ ಮಡಿವಾಳ, ನೆಹರು ಯುವ ಕೆಂದ್ರದ ಸ್ವಯಂ ಸೇವಕ ಸುನಿಲ್ ಹೆಚ್. ಜಿ. ಉಪಸ್ಥಿತರಿದ್ದರು.
ಸ್ನೇಹ ಮಹಿಳಾ ಮಂಡಲ ಸದಸ್ಯರಾದ ಭಾಗ್ಯಲಕ್ಷ್ಮೀ ಸ್ವಾಗತಿಸಿದರು, ಸುಜಾತ ಧನ್ಯವಾದಗೈದರು ಸುಶೀಲಾ ಕಾರ್ಯಕ್ರಮ ನಿರೂಪಿಸಿದರು.