ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ಉದ್ಯಮಿ, ಶಿಕ್ಷಣ ತಜ್ಞ ಆರ್ ಎನ್ ಶೆಟ್ಟಿ(92) ಗುರುವಾರ ನಸುಕಿನ ಜಾವ 3.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕೃಷಿ ಕುಟುಂಬದಲ್ಲಿ 1928ರಲ್ಲಿ ಜನಿಸಿದ ರಾಮ ನಾಗಪ್ಪ ಶೆಟ್ಟಿ ಅವರು ಪ್ರೌಢಶಿಕ್ಷಣದ ಬಳಿಕ ಶಿರಸಿಯ ನಾಗರಿಕ ಗುತ್ತಿಗೆದಾರರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಮುಂದೆ ಅವರು ಉದ್ಯಮಿಯಾಗಿ ಬೆಳೆದು ಬಹುದೊಡ್ಡ ಹೆಸರು ಮಾಡಿದ್ದರು. 1967ರಲ್ಲಿ ಪಾಲುದಾರ ಕಂಪೆನಿಯಾದ ಆರ್. ಎನ್. ಶೆಟ್ಟಿ ಆಂಡ್ ಕಂಪೆನಿ ಆರಂಬಿಸಿದರು. ಅದರ ಮೂಲಕ ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ವರಾಹಿ ವಿದ್ಯುತ್ ಯೋಜನೆ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಆಸ್ಪತ್ರೆ, ಮೋಟಾರ್ಸ್ ಕಂಪೆನಿ, ಫೈನಾನ್ಸ್, ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಿ ಯಶಸ್ಸು ಗಳಿಸಿದ್ದರು. ಮುರುಡೇಶ್ವರ ದೇವಸ್ಥಾನದ ಅನುವಂಶಿಕ ಾಡಳಿತಾಧಿಕಾರಿಯಾಗಿ ಅದನ್ನು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವನ್ನಾಗಿಸುವಲ್ಲಿ ಯಶ ಕಂಡಿದ್ದರು. ಸಾಂಸ್ಕೃತಿಕ, ಧಾರ್ಮಿಕ, ವೈದ್ಯಕೀಯ, ವಾಣಿಜ್ಯ, ಶೈಕ್ಷಣಿಕ ಕ್ಷೇತ್ರಗಳಗೆ ಆರ್. ಎನ್. ಶೆಟ್ಟಿ ಅವರ ಕೊಡುಗೆ ದೊಡ್ಡದಿದೆ.
ಮೃತರು ಪತ್ನಿ, ಮೂವರು ಗಂಡು, ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.