ಕುಂದಾಪುರ: ತೆಕ್ಕಟ್ಟೆ ಫ್ರೆಂಡ್ಸ್ 200 ಸದಸ್ಯ ಬಲದೊಂದಿದೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಮಾಜಮುಖಿ ಕಾರ್ಯಗಳನ್ನು ಶೃದ್ದೆಯಿಂದ ಮಾಡಿಕೊಂಡು ಬರುತ್ತಿದ್ದು, ಕಳೆದ 5 ವರ್ಷಗಳಿಂದ ಉಚಿತ ಅಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ತನಕ 700ಕ್ಕೂ ಹೆಚ್ಚು ಜೀವಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ ತೃಪ್ತಿ ಸಂಸ್ಥೆಗಿದೆ. ಈ ಉಚಿತ ಅಂಬುಲೆನ್ಸ್ ನಿರ್ವಹಣೆಯಾಗಿ ಆ.15ರಂದು ಸಂಜೆ 6 ಗಂಟೆಯಿಂದ ತೆಕ್ಕಟ್ಟೆ ಕಾಲೇಜು ವಠಾರದಲ್ಲಿ ತೆಂಕುತಿಟ್ಟು ಯಕ್ಷಗಾನ ’ಅಕ್ಷಯಾಂಬರ-ಗದಾಯುದ್ಧ’ವನ್ನು ಆಯೋಜಿಸಲಾಗಿದೆ ಎಂದು ತೆಕ್ಕಟ್ಟೆ ಫ್ರೆಂಡ್ಸ್ ಸಂಚಾಲಕ ಪ್ರಕಾಶ್ ಶೆಟ್ಟಿ ತಿಳಿಸಿದರು.
ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆಗಾಗಿ ಯಕ್ಷ ಹೊನಲು-2015 ನಡೆಯಲಿದ್ದು, ಉಚಿತ ಅಂಬುಲೆನ್ಸ್ ನಿರ್ವಹಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಕ್ಷಗಾನ ಸ್ಟಾರ್ ಭಾಗವತರೆಂದೇ ಗುರುತಿಸಲ್ಪಟ್ಟ ಪಟ್ಲ ಸತೀಶ್ ಶೆಟ್ಟಿ ಓರ್ವ ಕಲಾವಿದರಾಗಿ, ಕಲೆಯ ಮೂಲಕ ತೆಕ್ಕಟ್ಟೆ ಫ್ರೆಂಡ್ಸ್‌ನ ಸಮಾಜ ಸೇವೆಯ ಕೈಂಕರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಆ ಮೂಲಕ ಯಕ್ಷ ಹೊನಲಿಯಲ್ಲಿ ಅವರ ರಸಧಾರೆ ಪ್ರೇಕ್ಷಕರನ್ನು ರಂಜಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ತೆಂಕಿನ ಖಾತಿವೆತ್ತ ಕಲಾವಿದರು ಭಾಗವಹಿಸಲಿದ್ದಾರೆ. ಪಟ್ಲರ ಜೊತೆ, ಪುತ್ತಿಗೆ, ಬಳ್ಳಮಂಜ ಗಾನ ವೈಭವ ಸಾಧರ ಪಡಿಸಲಿದ್ದಾರೆ. ಕಲಾಸೇವೆಯ ಜೊತೆಗೆ ಸಾಮಾಜಿಕ ಕೈಂಕರ್ಯವನ್ನು ಬೆಂಬಲಿಸಿದ ಪಟ್ಲರನ್ನು ಶಿರೂರು ಶ್ರೀಗಳು ಅಭಿನಂದಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಟ್ಲ ಸತೀಶ ಶೆಟ್ಟರು ಹಾಡಿದ ಅಪರೂಪದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಕಾರ್ಯಕ್ರಮ ವೀಕ್ಷಣೆಗೆ 3000 ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ತೆಕ್ಕಟ್ಟೆ ಫ್ರೆಂಡ್ಸ್ ಗೌರವ ಸಲಹೆಗಾರ ಮಹೇಶ ಹೆಗ್ಡೆ, ಖಜಾಂಚಿ ಸುರೇಶ ಆಚಾರ್ ಉಪಸ್ಥಿತರಿದ್ದರು.