ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪೂರಕ ಕಲಿಕಾ ವಾತಾವರಣ ಕಲ್ಪಿಸಿದರೆ ಅವರು ಸಿಎ ಪರೀಕ್ಷೆಯನ್ನೂ ಅನಾಯಾಸವಾಗಿ ತೇರ್ಗಡೆ ಹೊಂದಬಲ್ಲರು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕಾಮರ್ಸ್ ಪ್ರೊಫೆಶನಲ್ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ಸಿಎ ಫೌಂಡೇಶನ್ ಹಾಗೂ ಸಿಎ ಇಂಟರ್ಮೀಡಿಯೇಟ್ ಕೋರ್ಸ್‌ಗಳ ಒರಿಯೆಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಂಡಾಗ ಉನ್ನತ ಕೋರ್ಸ್‌ಗಳ ಪಡೆಯಲು ಸಾಧ್ಯ ಈ ಮೂಲಕ ಔದ್ಯೋಗಿಕ ಅವಕಾಶಗಳು ಹೆಚ್ಚಾಗುತ್ತದೆ. ಜೀವನದಲ್ಲಿ ಉದ್ದೇಶವಿಲ್ಲದೆ ಶಿಕ್ಷಣ ಕಲಿಯಲು ಸಾಧ್ಯವಿಲ್ಲ ಕಠಿಣ ಪರಿಶ್ರಮವಿದ್ದಾಗ ಯಶಸ್ಸು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಅಧ್ಯಕ್ಷ ಸಿಎ ಕೆ ಸುಬ್ರಮಣ್ಯ ಕಾಮತ್ ಮಾತನಾಡಿ, ಮನಸ್ಸಿನಲ್ಲಿ ಧೃಢವಾದ ಸಂಕಲ್ಪ ,ಗುರಿ ಮುಂದಿಟ್ಟು ತಯಾರಿ ನಡೆಸಬೇಕು. ಕಲಿಕೆಯ ಜತೆಗೆ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಬೇಕು. ಕಷ್ಟಪಟ್ಟು ಓದಿದರೆ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸದರ್ನ್ ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಸಿಎ ಗೌತಮ್ ಪೈ ಹೊಸ ವಿಚಾರಗಳಲ್ಲಿ ತೊಡಗಿಸಿಕೊಂಡು ಅವಕಾಶಗಳನ್ನು ಸದ್ಭಳಕೆ ಮಾಡಬೇಕು. ಶಿಸ್ತು ಮತ್ತು ಸಮಯ ಪಾಲನೆಯೊಂದಿಗೆ ಜೀವನದಲ್ಲಿ ಛಲ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ತ್ರಿಷಾ ಕ್ಲಾಸಸ್ನ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ , ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ,ಆಳ್ವಾಸ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎಂ. ಡಿ , ಕಾಮರ್ಸ್ ಪ್ರೊಫೆಷನಲ್ ವಿಭಾಗದ ಸಂಯೋಜಕ ಆಶೋಕ ಕೆ ಜಿ ಉಪಸ್ಥತರಿದ್ದರು. ವಿದ್ಯಾರ್ಥಿನಿ ಪ್ರತೀತ ಸ್ವಾಗತಿಸಿ, ತರುಣ್ ವಂದಿಸಿ, ಪ್ರೇರಣಾ ಹೆಬ್ಬಾರ್ ನಿರೂಪಿಸಿದರು.