ಶರೀರದಿಂದ ಬೆವರು ಬರುವುದು ಒಳ್ಳೆಯದು ಆದರೆ ವಿಪರೀತ ಬರುವುದರಿಂದ ಆ ವ್ಯಕ್ತಿ ತುಂಬಾ ಕಿರಿಕಿರಿ ಅನುಭವಿಸುತ್ತಾನೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಹೈಡ್ರೋಸಿಸ್ ಎಂದು ಕರೆಯುತ್ತಾರೆ. ಹೈಪರ್ ಅಂದರೆ ಅತ್ಯಧಿಕ, ಹೃಡ್ರೋಸಿಸ್ ಅಂದರೆ ಬೆವರು. ವಿಪರೀತ ಬೆವರುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ಅದು ವ್ಯಕ್ತಿಯ ಕ್ವಾಲಿಟಿ ಲೈಫ್(ದಿನನಿತ್ಯದ ಬದುಕಿನಲ್ಲಿ) ಮೇಲೆ ಪರಿಣಾಮ ಬೀರುತ್ತದೆ.
ವಿಶ್ವದಲ್ಲಿ ಶೇ.5ರಷ್ಟು ಜನರಿಗೆ ಈ ತೊಂದರೆಯಿದೆ. ಇದು ಎಲ್ಲಾ ವಯಸ್ಸಿನವರಲ್ಲೂ ಕಂಡು ಬರಬಹುದು, ಆದರೆ 24-64 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬಿಸಿಲಿನಲ್ಲಿ ಓಡಾಡಿದಾಗ, ವ್ಯಾಯಾಮ ಮಾಡಿದಾಗ ಮೈ ಬೆವರುವುದು ಸಹಜ, ಆದರೆ ಕೆಲವರಿಗೆ ಎಲ್ಲಾ ಸಮಯದಲ್ಲೂ ಮೈ ತುಂಬಾ ಬೆವರುವುದು. ಅವರ ಅಂಗೈ, ಕಾಲುಗಳು ಸದಾ ಬೆವರುತ್ತಿರುತ್ತದೆ.
ಅತ್ಯಧಿಕ ಬೆವರು:
ಬೆವರುವುದು ನಮ್ಮ ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ದೇಹದಲ್ಲಿ ಉಷ್ಣಾಂಶವನ್ನು ತಡೆಗಟ್ಟಿ, ತಂಪಾಗಿಸುವಲ್ಲಿ ಸಹಕಾರಿ. ನಮ್ಮ ದೇಹವು ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, ಆದ್ದರಿಂದಲೇ ಬೇಸಿಗೆಯಲ್ಲಿ ಹೆಚ್ಚು ಬೆವರುವ ಮೂಲಕ ದೇಹವನ್ನು ತಂಪಾಗಿಡುತ್ತದೆ, ಚಳಿಗಾಲದಲ್ಲಿ ಬೆವರದೆ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಹೈಪರ್ಹೈಡ್ರೋಸಿಸ್ನಲ್ಲಿ ಎರಡು ಬಗೆಗಳಿವೆ:
ಬೆವರಿನ ಸಮಸ್ಯೆ ಇರುವವರಿಗೆ ಬೇಸಿಗೆ, ಚಳಿಗಾಲ ಅಂತಿಲ್ಲ, ಎಲ್ಲಾ ಸಮಯದಲ್ಲೂ ಬೆವರುತ್ತಲೇ ಇರುತ್ತಾರೆ. ಯಾವುದೇ ದೈಹಿಕ ವ್ಯಾಯಾಮ ಮಾಡದಿದ್ದರೂ ಇವರ ದೇಹದಿಂದ ಬೆವರು ಸುರಿಯುವುದು. ಈ ಹೈಪರ್ಹೈಡ್ರೋಸಿಸ್ನಲ್ಲಿ ಎರಡು ಬಗೆಗಳಿವೆ.
ಫ್ರೈಮರಿ ಫೋಕಲ್ ಹೈಪರ್ಹೈಡ್ರೋಸಿಸ್ (PFH): ಈ ಸಮಸ್ಯೆ ಚಿಕ್ಕ ಮಕ್ಕಳಿರುವಾಗಲೇ ಇರುತ್ತದೆ. ಇದು ಅನುವಂಶೀಯವಾಗಿ ಬರುತ್ತದೆ.
ಸೆಕೆಂಡರಿ ಫೋಕಲ್ ಹೈಪರ್ಹೈಡ್ರೋಸಿಸ್(SFH): ಇದು ಪ್ರಾಯಕ್ಕೆ ಬಂದ ಮೇಲೆ ಶುರುವಾಗುವುದು. ಕೆಲವರಿಗೆ ಮಧುಮೇಹ, ಸೋಂಕು, ಮಾನಸಿಕ ಸಮಸ್ಯೆ (ಅಧಿಕ ಒತ್ತಡ), ಗಾಯ, ಟ್ಯೂಮರ್ ಈ ಎಲ್ಲಾ ಕಾರಣಗಳಿಂದ ಉಂಟಾಗುತ್ತದೆ. ಇನ್ನು ಆರೋಗ್ಯವಂತರಲ್ಲೂ ಈ ರೀತಿಯ ಸಮಸ್ಯೆ ಕಂಡು ಬರುವುದುಂಟು. ಮಹಿಳೆಯರಲ್ಲಿ ಮೆನೋಪಾಸ್ ಸಮಯದಲ್ಲಿ ಈ ರೀತಿ ಅಧಿಕ ಬೆವರು ಬರುವುದು ಸಹಜ.
ಹೈಪೋಹೈಡ್ರೋಸಿಸ್ ಲಕ್ಷಣಗಳು:
ಅತ್ಯಧಿಕ ಬೆವರುವುದು ಕೈಗಳು ಹಗೂ ಪಾದಗಳು ತುಂಬಾ ಬೆವರುವುದು ಬಟ್ಟೆ ಒದ್ದೆಯಾಗಿ ಆಗಾಗ ಬಟ್ಟೆ ಬದಲಾಯಿಸಬೇಕಾಗಿರುವುದು ಬೆವರಿನ ದುರ್ನಾತ ಇದರಿಂದ ಜನರೊಂದಿಗೆ ಬೆರೆಯಲು ಮುಜುಗರ ಉಂಟಾಗುವುದು
ಹೈಪರ್ಹೈಡ್ರೋಸಿಸ್ನಿಂದ ಉಂಟಾಗುವ ತೊಂದರೆಗಳು:
ತ್ವಚೆಯ ಮೇಲಿನ ಚರ್ಮ ಕಿತ್ತು ಬರುವುದು, ಇದು ಬೆವರು ನಿಂತು ಬ್ಯಾಕ್ಟಿರಿಯಾ, ಸೋಂಕು ತಗುಲಿ ಉಂಟಾಗುವುದು. ವಿಪರೀತ ಬೆವರುವುದರಿಂದ ಮೈ ದುರ್ನಾತ ಬೇಗನೆ ಬೀರುವುದು, ಇದರಿಂದ ಜನರೊಂದಿಗೆ ಬೆರೆಯಲು ಮುಜುಗರ ಉಂಟಾಗುವುದು. ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗದೇ ಇದ್ದಾಗ ಅವರಲ್ಲಿ ಮಾನಸಿಕ ಒತ್ತಡ, ಖಿನ್ನತೆ ಕೂಡ ಕಾಡಬಹುದು.
ಪತ್ತೆಹಚ್ಚುವುದು ಹೇಗೆ?
ಮೈ ತುಂಬಾ ಬೆವರುತ್ತಿದ್ದರೆ ಹೈಪರ್ಹೈಡ್ರೋಸಿಸ್ ಇರಬಹುದೇ ಎಂದು ತಿಳಿಯಲು ಮಾನಸಿಕ ಸಮಸ್ಯೆ, ಗೊಂದಲು, ಗಾಯ ಮೊದಲಾದ ಸಮಸ್ಯೆಗಳಿವೆಯೇ ಎಂದು ಕೇಳಿ ತಿಳಿದುಕೊಳ್ಳುತ್ತಾರೆ. ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡುತ್ತಾರೆ ಐಯೋಡಿಯನ್ ಸ್ಟ್ರಾಚ್ ಟೆಸ್ಟ್ ಮಾಡಲಾಗುವುದು ಇನ್ನು ಪೇಪರ್ ಟೆಸ್ಟ್ ಮೂಲಕ ಎಷ್ಟು ಪ್ರಮಾಣದಲ್ಲಿ ಬೆವರು ಉತ್ಪತ್ತಿಯಾಗುತ್ತದೆ ಎಂದು ಕಂಡು ಹಿಡಿಯುತ್ತಾರೆ.
ಚಿಕಿತ್ಸೆ
Antiperspirants: ಇದು ಹೈಪರ್ ಹೈಡ್ರೋಸಿಸ್ ಲಕ್ಷಣ ಸ್ವಲ್ಪ ಇರುವವರಿಗೆ ನೀಡಲಾಗುವುದು. Iontophoresis:ರೋಗಿಯ ತ್ವಚೆಗೆ ನೀರಿನ ಮೂಲಕ ಸ್ವಲ್ಪ ಕರೆಂಟ್ ತಾಗಿಸಿ, ಬೆವರಿನ ಗ್ರಂಥಿಗಳನ್ನು ಬ್ಲಾಕ್ ಮಾಡುವ ಮೂಲಕ ಬೆವರಿನ ಸಮಸ್ಯೆ ಕಡಿಮೆ ಮಾಡುತ್ತಾರೆ.
Anticholinergic drugs: ಇದರಲ್ಲಿ ಬೆವರು ಗ್ರಂಥಿಗಳಿಗೆ ಸಂದೇಶ ನೀಡುವ acetylcholine ಎಂಬ ನ್ಯೂರೋ ಟ್ರಾನ್ಸ್ಮಿಟರ್ನನ್ನು ಬ್ಲಾಕ್ ಮಾಡಿ ಬೆವರು ಕಡಿಮೆ ಉಂಟಾಗುವಂತೆ ಮಾಡುವುದು
Botox: ಇದರಲ್ಲಿ ಬೆವರು ಉತ್ಪತ್ತಿ ಮಾಡುವ ಗ್ರಂಥಿಗಳನ್ನು ಬ್ಲಾಕ್ ಮಾಡಲಾಗುವುದು ಸರ್ಜರಿ: ಅತ್ಯಧಿಕ ಬೆವರು ಉಂಟು ಮಾಡುವ ಬೆವರಿನ ಗ್ರಂಥಿಗಳನ್ನು ತೆಗೆಯುವ ಮೂಲಕ ಈ ಸಮಸ್ಯೆ ಪರಿಹರಿಸಲಾಗುವುದು.
ಬೆವರು ಹೆಚ್ಚು ಬಾರದಂತೆ ತಡೆಯುವುದು ಹೇಗೆ?
ಹತ್ತಿಯ ಬಟ್ಟೆಗಳನ್ನು ಧರಿಸಿ ಸರಿಯಾಗಿ ಗಾಳಿಯಾಡುವ ಶೂ ಧರಿಸಿ, ತುಂಬಾ ಬೆವರುವವರಿಗೆ ಸ್ಯಾಂಡಲ್ ಒಳ್ಳೆಯದು. ಸಡಿಲವಾದ ಬಟ್ಟೆ ಧರಿಸಿ. ಶುಭ್ರವಾದ ಬಟ್ಟೆ, ಸಾಕ್ಸ್, ಸ್ವಚ್ಛ ಮಾಡಿದ ಶೂ ಧರಿಸಿ.