ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯದಲ್ಲಿ 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಭಿನ್ನ ಮಾದರಿಯಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ ಈ ವರ್ಷ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಮಕ್ಕಳ ಯೋಗಕ್ಷೇಮ ಮತ್ತು ಶೈಕ್ಷಣಿಕ ಭವಿಷ್ಯ ಇದನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ನಡೆಸುವುದಿಲ್ಲ. ಬದಲಾಗಿ ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ 2021ರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಭಿನ್ನ ಮಾದರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ:
ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಭಿನ್ನ ಮಾದರಿಯಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಶ್ನೆಗಳು ಸರಳವಾಗಿ ನೇರವಾಗಿ ಇರುತ್ತದೆ. ಪರೀಕ್ಷೆ ನಡೆಸುವ 20 ದಿನ ಮೊದಲೇ ತಿಳಿಸಲಾಗುವುದು, ಯಾರನ್ನೂ ಫೇಲ್ ಮಾಡುವ ಉದ್ದೇಶವಿಲ್ಲ. ಪಿಯುಸಿಯಲ್ಲಿ ಯಾವ ವಿಷಯ ಆಯ್ದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿಗೆ ಕೋರ್ ವಿಷಯ (ವಿಜ್ಞಾನ, ಗಣಿತ, ಸಮಾಜ ವಿಜ್ಞಾನ)ಕ್ಕೆ ಒಂದು ಪರೀಕ್ಷೆ. ಬಹು ಆಯ್ಕೆ ಪ್ರಶ್ನೆಗಳು ಮಾತ್ರ ಇರಲಿದೆ ಹಾಗೂ ಸರಳವಾಗಿರಲಿದೆ. ಪ್ರಥಮ ಭಾಷೆ, ದ್ವಿತೀಯ ಹಾಗೂ ತೃತೀಯ ಭಾಷೆಗೆ ಮತ್ತೊಂದು ಪರೀಕ್ಷೆ ಇರಲಿದೆ. ಪ್ರತಿ ಸಬ್ಜೆಕ್ ಗೆ 40 ಅಂಕಗಳು. 120 ಅಂಕಗಳಿಗೆ ನಡೆಯುತ್ತಿರುವಂತ ಪರೀಕ್ಷೆಗೆ ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆ ಸರಳ, ನೇರವಾಗಿರುತ್ತದೆ. ಯಾವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ. ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ.ಇದಲ್ಲದೆ ಎಸ್ಎಸ್ಎಲ್ಸಿಗೂ ಗ್ರೇಡ್ ಆಧಾರಿತ ಅಂಕ ನೀಡಲಾಗುವುದು. ಎ, ಎ ಪ್ಲಸ್ ಮಾದರಿಯಲ್ಲಿ ಗ್ರೇಡ್ ವ್ಯವಸ್ಥೆ ಇರಲಿದೆ. ಒಂದು ಕೊಠಡಿಯಲ್ಲಿ 10ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಎನ್ 95 ಮಾಸ್ಕ್ ವಿತರಣೆ ಮಾಡಲಾಗುತ್ತದೆ.
ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶಗಳು ಪ್ರಕಟವಾಗಲಿದ್ದು, ಈ ವರ್ಷ ಪೂರಕ ಪರೀಕ್ಷೆ ಇರುವುದಿಲ್ಲ. ಆದರೆ ಕೊರೊನಾ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ. ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಜುಲೈ ಮೂರನೇ ವಾರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಪರೀಕ್ಷೆಯಲ್ಲಿ ಯಾರನ್ನೂ ಕೂಡ ಫೈಲ್ ಮಾಡುವುದಿಲ್ಲ. ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.