ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಗತ್ತಿನ ಹಲವು ದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಡಾನ್ ಬಾಸ್ಕೊ ಸಂಸ್ಥೆ ಗುಣಮಟ್ಟದ ಶಿಕ್ಷಣದ ಪ್ರತೀಕವಾಗಿದೆ. ಅಂತಹ ಸಂಸ್ಥೆ ತ್ರಾಸಿಯಂತಹ ಗ್ರಾಮೀಣ ಭಾಗದಲ್ಲಿ ಸಿಬಿಎಸ್‌ಸಿ ಪಠ್ಯಕ್ರಮದ ಸೀನಿಯರ್ ಸೆಕೆಂಡರಿ ಶಾಲೆ ತೆರೆದಿರುವುದು ಒಂದು ಮಹತ್ವದ ಬೆಳವಣಿಗೆ ಎಂದು ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ. ನೈನಾನ್ ಹೇಳಿದರು.
ಅವರು ನೂತನ ಸೀನಿಯರ್ ಸೆಕೆಂಡರಿ ಶಾಲೆಯ 11ನೆ ತರಗತಿಯು ಈಚೆಗೆ ವರ್ಚುವಲ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಉದ್ಘಾಟನೆಗೊಳಿಸಿ ಮಾತನಾಡಿದರು.
ಸಿಬಿಎಸ್‌ಇಯ 11 ಮತ್ತು 12ನೆ ತರಗತಿ ಶಿಕ್ಷಣವು ಅದೇ ಹಂತದ ಪಿಯುಸಿ ಶಿಕ್ಷಣಕ್ಕಿಂತ ಮೇಲ್ಮಟ್ಟದ್ದು. ಮಹತ್ವದ ಶೈಕ್ಷಣಿಕ ಮೈಲುಗಲ್ಲು ಎಂದು ಪರಿಗಣಿತವಾದ ಅದರ ವಿದ್ಯಾರ್ಥಿಯಾಗುವುದು ಜಾಣ ಆಯ್ಕೆಯೆನಿಸುತ್ತದೆ. ಅದರಲ್ಲಿ ಉತ್ತೀರ್ಣರಾದವರು ಐಐಟಿ, ಐಐಎಂನಂತಹ ಪ್ರತಿಷ್ಠಿತ ಶಿಕ್ಷಣಕ್ಕೆ ಸುಲಭದಲ್ಲಿ ಪ್ರವೇಶ ಪಡೆಯುತ್ತಾರೆ ಮತ್ತು ಶಿಕ್ಷಣ ಪಡೆದ ಬಳಿಕ ಮಹತ್ವದ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ ಎಂದ ಮ್ಯಾಥ್ಯೂ ನೈನಾನ್ ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ಉಪಯುಕ್ತ ಆಗಬೇಕಾದರೆ ಧನಾತ್ಮಕ, ಕ್ರಿಯಾಶೀಲ ಮತ್ತು ಸಂತಸದಾಯಕ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು. ದೇವರು, ಗುರುಗಳು, ಬಂಧುಗಳು, ಸ್ನೇಹಿತರೊಂದಿಗೆ ಸುಸಂಬಂಧ ಬೆಳೆಸಿಕೊಳ್ಳಬೇಕು ಎಂದರು.
ಫಾ. ಫೆಲಿಕ್ಸ್ ಫರ್ನಾಂಡಿಸ್ ಮಾತನಾಡಿ, ಶಾಲೆ ಮೇಲ್ದರ್ಜೆಗೇರಿರುವುದು ಒಂದು ಮಹತ್ವದ ಹೆಜ್ಜೆ. ಪರಿಸರದ ವಿದ್ಯಾರ್ಥಿಗಳ ಬಾಳಿನ ಸುಯೋಗ ಎಂದು ಹೇಳಿದರು. ಡಾನ್ ಬಾಸ್ಕೊ ಪಣಜಿ-ಕೊಂಕಣ ಪ್ರಾಂತ್ಯಾಧಿಕಾರಿ ಫಾ. ಫೆಲಿಕ್ಸ್ ಫರ್ನಾಂಡಿಸ್ ಮತ್ತು ಉಪ ಪ್ರಾಂತ್ಯಾಧಿಕಾರಿ ಫಾ. ಕ್ಲೈವ್ ಟೆಲಿಸ್ ಗೋವಾದ ಪ್ರಾಂತ ಕಚೇರಿಯಲ್ಲಿ ತರಗತಿಯನ್ನು ಉದ್ಘಾಟಿಸಿದರು. ಆ ಬಳಿಕ ಶಾಲೆಯ ರೆಕ್ಟರ್ ಫಾ. ಲಿಯೊ ಪಿರೇರಾ, ಪ್ರಾಂಶುಪಾಲ ಫಾ. ಮ್ಯಾಕ್ಸಿಂ ಡಿಸೋಜ, ಉಪ ಪ್ರಾಂಶುಪಾಲ ಫಾ. ಮರ್ವಿನ್ ಫೆನಾಂಡಿಸ್ ಉದ್ಘಾಟಿಸಿದರು
ಈ ಸಂದರ್ಭ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾನ್ ಬಾಸ್ಕೊ 20ನೆ ಶತಮಾನದ ಶ್ರೇಷ್ಠ ಶಿಕ್ಷಣ ತಜ್ಞರಲ್ಲಿ ಒಬ್ಬರು. ಉತ್ತಮ ಸಮಾಜ ನಿರ್ಮಿಸಬೇಕಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಮತ್ತು ಪ್ರೀತಿಯಿಂದ ಅವರ ವಿಶ್ವಾಸ ಗಳಿಸಬೇಕು ಎಂದು ಅವರು ದೃಢವಾಗಿ ನಂಬಿದ್ದರು. -ಫಾ. ಫೆಲಿಕ್ಸ್ ಫರ್ನಾಂಡಿಸ್