ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣು ಹಂಪಲುಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಕೂಡ ಹಿರಿಯವರು ಬೆಳೆಸುತ್ತಿದ್ದರು. ಇದರಿಂದ ಮನೆಯ ಔಷಧೋಪಚಾರದ ಸಮಸ್ಯೆಯೂ ಬಗೆಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ಸಂರಕ್ಷಣೆ ದೊರೆಯುತ್ತಿತ್ತು. ಆದರೆ ಇಂದಿನ ಅಪಾಂಟ್‌ಮೆಂಟ್ ಯುಗದಲ್ಲಿ ಹಿತ್ತಲು ಎಂಬುದಕ್ಕೆ ಜಾಗವೇ ಇಲ್ಲದಂತಾಗಿದೆ. ಅದಾಗ್ಯೂ ಪ್ಲಾಟ್ಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.
ತುಳಸಿ:
ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪವಿತ್ರ ಗಿಡವೆಂಬ ಮನ್ನಣೆ ಇದೆ. ತನ್ನ ಔಷಧೀಯ ಗುಣಗಳಿಂದ ಇದು ಸಸ್ಯ ಜಗತ್ತಿನ ರಾಣಿ ಎಂದೆನಿಸಿದೆ. ಇದನ್ನು ಹರ್ಬಲ್ ಚಹಾ ರೂಪದಲ್ಲಿ ಅಂತೆಯೇ ಹಸಿಯಾಗಿ ಕೂಡ ಸೇವಿಸಬಹುದು. ತುಳಸಿಯಲ್ಲಿ ಹಲವಾರು ವಿಧಗಳಿದ್ದು ರಾಮ ತುಳಸಿ, ವನ ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ ಎಂಬವುಗಳಿವೆ. ದೇಹದ ಹೊರಗಿನ ಸಮಸ್ಯೆಗಳಿಗೆ ಕರ್ಪೂರ ತುಳಸಿಯನ್ನು ಬಳಸಬಹುದಾಗಿದೆ. ಕಿವಿ ನೋವಿಗೆ ಇಯರ್ ಡ್ರಾಪ್ಸ್ನಂತೆ ಇದು ಕೆಲಸ ಮಾಡುತ್ತದೆ. ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತುಳಸಿ ಪಡೆದುಕೊಂಡಿದ್ದು ಜ್ವರ, ಸಾಮಾನ್ಯ ಶೀತಕ್ಕೆ ಉತ್ತಮ ಔಷಧಿ ಎಂದೆನಿಸಿದೆ.ರಾಮ ತುಳಸಿಯು ತೀವ್ರ ಉಸಿರಾಟ ಸಮಸ್ಯೆಗಳಿಗೆ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿಯ ರಸವನ್ನು ಶೀತ, ಜ್ವರ, ಬ್ರಾಂಕೈಟಿಸ್ ಮತ್ತು ಕೆಮ್ಮಿಗೆ ನೀಡಲಾಗುತ್ತದೆ. ಮಲೇರಿಯಾವನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ. ಅಜೀರ್ಣ, ತಲೆನೋವು, ನಿದ್ರಾಹೀನತೆ ಮತ್ತು ಕಾಲಾರಾಗೆ ಇದು ಪರಿಣಾಮಕಾರಿ ಔಷಧಿಯಾಗಿದೆ. ಪ್ರತೀ ದಿನ ಮಿಲಿಯಗಟ್ಟಲೆ ಜನರು ಶುದ್ಧ ತಾಜಾ ತುಳಸಿಯನ್ನು ಹಾಗೆಯೇ ಸೇವಿಸುತ್ತಾರೆ.
ಮೆಂತೆ:
ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಿರುವ ಸಾಂಬಾರು ಪದಾರ್ಥವಾಗಿದೆ ಮೆಂತ್ಯ. ಮೆಂತ್ಯ ಬೀಜ ಮತ್ತು ಎಲೆಗಳೆರಡರಲ್ಲೂ ಅತೀ ಹೆಚ್ಚು ಪೌಷ್ಟಿಕಾಂಶಗಳಿವೆ. ದೇಹಕ್ಕೆ ಶೀತಕಾರಿಯಾಗಿ ಇದು ಪರಿಣಮಿಸಿದೆ. ಮಡಿಕೆಗಳಲ್ಲಿ ಯಾವುದೇ ವಾತಾವರಣದಲ್ಲಿ ಇವುಗಳನ್ನು ಬೆಳೆಸಬಹುದಾಗಿದೆ. ತೂಕ ಹೆಚ್ಚಲು ಮತ್ತು ದೇಹದಾರ್ಢ್ಯದ ಸಮಯದಲ್ಲಿ ಇದನ್ನು ಸೇವಿಸುತ್ತಾರೆ. ಶ್ವಾಸಕೋಶದ ಕ್ಯಾನರ್ನಂತಹ ಅಪಾಯಕಾರಿ ಕಾಯಿಲೆಯನ್ನು ದೂರಮಾಡಲು ಮೆಂತೆ ಸಹಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಇದು ಉತ್ತಮಗೊಳಿಸುತ್ತದೆ. ಋತುಚಕ್ರದ ನೋವು ಮತ್ತು ಹೆರಿಗೆಯ ನೋವಿನ ಸಮಯದಲ್ಲಿ ಇದನ್ನು ನೋವು ಶಮನಕವಾಗಿ ಬಳಸಲಾಗುತ್ತದೆ. ಉರಿಯೂತ, ಹೊಟ್ಟೆಯ ಹುಣ್ಣು ಮತ್ತು ಕರುಳಿನ ಕಾಯಿಲೆಯನ್ನು ನಿವಾರಿಸುವಲ್ಲಿ ಮೆಂತೆ ಸಿದ್ಧಹಸ್ತ ಎಂದೆನಿಸಿದೆ. ಕೆಟ್ಟ ಉಸಿರಾಟಕ್ಕೂ ಇದು ಶಮನಕಾರಿಯಾಗಿದೆ. ಮನೆಯಲ್ಲಿ ಬೆಳೆಸಬಹುದಾದ ಸಸ್ಯ ಇದಾಗಿದೆ.
ಲಿಂಬೆ ಹುಲ್ಲು:
ಮನೆಯಲ್ಲೇ ಬೆಳೆಸಬಹುದಾದ ಇನ್ನೊಂದು ಸಸ್ಯವಾಗಿದೆ ಲಿಂಬೆ ಹುಲ್ಲು. ಸಣ್ಣ ಚಟ್ಟಿಯಲ್ಲಿ ಕೂಡ ಇದನ್ನು ಬೆಳೆಯಬಹುದಾಗಿದೆ. ಆರೋಗ್ಯಕಾರಿ ಪ್ರಯೋಜನಕಗಳನ್ನು ಈ ಹುಲ್ಲು ಒಳಗೊಂಡಿದೆ. ಚಹಾ, ಸಲಾಡ್, ಸೂಪ್ ಮತ್ತು ಎಲ್ಲಾ ಅಡಿಗೆ ಖಾದ್ಯಗಳಲ್ಲಿ ಇದನ್ನು ಬೆಳೆಸಬಹುದಾಗಿದೆ. ಲಿಂಬೆಯ ಅದ್ವಿತೀಯ ಸುವಾಸನೆಯನ್ನು ಈ ಹುಲ್ಲು ಹೊಂದಿದೆ. ನರ ಮತ್ತು ಒತ್ತಡ ಸಂಬಂಧಿ ಪರಿಸ್ಥಿತಿಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿ ಬಳಸಲ್ಪಡುತ್ತದೆ. ಹೆಚ್ಚಿನ ಜ್ವರದ ತಾಪವನ್ನು ಇದು ಕಡಿಮೆ ಮಾಡುತ್ತದೆ. ಉಸಿರಾಟಿ ಸಮಸ್ಯೆಗಳು ಮತ್ತು ಗಂಟಲು ನೋವಿಗೆ ಹೆಚ್ಚು ಪರಿಣಾಮಕಾರಿ ಔಷಧಿ ಎಂದೆನಿಸಿದೆ. ಕಿಬ್ಬೊಟ್ಟೆಯ ನೋವು, ತಲೆನೋವು, ಜಂಟಿ ನೋವು, ಸ್ನಾಯು ನೋವು, ಜೀರ್ಣಕ್ರಿಯೆ ಸಮಸ್ಯೆ, ಸ್ನಾಯು ಸೆಳೆತ, ಹೊಟ್ಟೆನೋವಿಗೆ ಪರಿಣಾಮಕಾರಿ ಎಂದೆನಿಸಿದೆ.
ಅಲೋವೇರಾ:
ಇದೊಂದು ಅದ್ಭುತ ಸಸ್ಯವೇ ಸರಿ. ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಯಬಹುದಾಗಿದೆ. ಇದಕ್ಕೆ ಸೂರ್ಯನ ತಾಪಮಾನ ಅಗತ್ಯ. ಮನೆಯಲ್ಲಿ ಬೆಳೆಸಲೇಬೇಕಾದ ಸಸ್ಯವಾಗಿದೆ ಇದು. ಸೊಳ್ಳೆಗಳ ನಿವಾರಣೆಗೆ ಇದು ಸಹಕಾರಿ. ಇದನ್ನು ಸೌಂದರ್ಯ ಅಂಶವಾಗಿ ಬಳಸುವುದರ ಜೊತೆಗೆ ಹೊಟ್ಟೆಗೂ ಸೇವಿಸಬಹುದಾಗಿದೆ. ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ಈ ಸಸ್ಯವು ನೈಸರ್ಗಿಕ ಬೂಸ್ಟರ್ ಎಂದೆನಿಸಿದೆ. ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ಎದುರಿಸಲು ಸಹಾಯ ಮಾಡುತ್ತವೆ. ನೀವು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ನಿತ್ಯವೂ ಅಲೋವೇರಾ ರಸವನ್ನು ಸೇವಿಸಿ ಮತ್ತು ಇದು ಸುಲಭವಾಗಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸುತ್ತದೆ. ದೇಹದಲ್ಲಿ ಗಾಯ, ಸುಟ್ಟ ಕಲೆಗಳು ಉಂಟಾದಾಗ ಇದು ಉರಿಯನ್ನು ಕೂಡಲೇ ನಿವಾರಿಸುತ್ತದೆ. ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಅತ್ಯುದ್ಭುತ ಎಂದೆನಿಸಿದೆ. ಅಲೋವೇರಾ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಪುದೀನಾ:
ವಿಶ್ವದ ಔಷಧಿಯ ಸಸ್ಯಗಳಲ್ಲಿ ಪುದೀನಾ ಕೂಡ ಒಂದು. ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಸಸ್ಯವಾಗಿದೆ ಪುದೀನಾ ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಸಿ ಯನ್ನು ಇದು ಒಳಗೊಂಡಿದೆ. ಜಜ್ಜಿದ ಪುದೀನಾ ಎಲೆಗಳನ್ನು ಸ್ನಾಯು ಸೆಳೆತದಂತ ನೋವಿಗೆ ಉಪಶಮನವಾಗಿ ಬಳಸಿಕೊಳ್ಳಬಹುದಾಗಿದೆ. ಇದೊಂದು ಅದ್ವಿತೀಯ ಬಾಯಿ ಸ್ವಚ್ಛಕ ಕೂಡ ಹೌದು. ಹೊಟ್ಟೆ ಉಬ್ಬರ, ಕರುಳಿನ ಸಮಸ್ಯೆಗಳು, ಹೊಟ್ಟೆನೋವಿಗೆ ಇದು ಉತ್ತಮ ಔಷಧಿ ಎಂದೆನಿಸಿದೆ.
ಒಂದೆಲಗ ಅಥವಾ ಬ್ರಾಹ್ಮಿ:
ಸ್ಮರಣೆಯನ್ನು ಉತ್ತಮಗೊಳಿಸುವ ಸಸ್ಯ ಇದಾಗಿದೆ. ಅಲ್ಸರ್, ಚರ್ಮ ಸಂಬಂಧಿ ರೋಗಗಳು, ಕ್ಯಾಪಿಲರಿ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಯವ್ವೌನವನ್ನು ಕಾಪಾಡಿಕೊಳ್ಳಬೇಕೆಂಬ ಉದ್ದೇಶ ನಿಮ್ಮದಾಗಿದ್ದರೆ ಈ ಸಸ್ಯ ಅತ್ಯುತ್ತಮ ಎಂದೆನಿಸಿದೆ. ನೀವು ಇದನ್ನು ಸುಲಭವಾಗಿ ಮನೆಗಳಲ್ಲಿ ಬೆಳೆಸಿಕೊಳ್ಳಬಹುದಾಗಿದೆ. ನರಗಳು ಮತ್ತು ಮೆದುಳನ್ನು ಪುನರುಜ್ಜೀವನಗೊಳಿಸುವಲ್ಲಿ ಇದು ಸಹಕಾರಿಯಾಗಿದೆ.
ಅಶ್ವಗಂಧ:
ಪುರಾತನ ಔಷಧೀಯ ಸಸ್ಯವಾಗಿ ಅಶ್ವಗಂಧ ಪ್ರಸಿದ್ಧವಾಗಿದೆ. ಇದು ಒತ್ತಡ ನಿವಾರಕ ಹೌದು ಮತ್ತು ಔಷಧೀಯ ಗುಣಗಳಿಂದ ಸಂಪನ್ನವಾಗಿದೆ. ಸಂತಾನಕ್ಕಾಗಿ, ಗಾಯವನ್ನು ಗುಣಪಡಿಸಲು, ರೋಗನಿರೋಧಕ ಸಸ್ಯವಾಗಿ ಇದನ್ನು ಬೆಳೆಸಬಹುದಾಗಿದೆ. ಹೃದಯಕ್ಕೆ ಅತ್ಯುತ್ತಮ ಔಷಧವಾಗಿದೆ. ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ. ಖಿನ್ನತೆ ಮತ್ತು ಆತಂಕವನ್ನು ಇದು ದೂರಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಸಸ್ಯ ನೆರವಾಗಲಿದೆ.
ಬೇವು:
ಔಷಧೀಯ ಗುಣಗಳಿಂದ ಅನಾದಿ ಕಾಲದಿಂದಲೂ ಬೇವು ಮನ್ನಣೆಯನ್ನು ಗಳಸಿಕೊಂಡಿದೆ. ಮರದ ರೂಪದಲ್ಲಿ ಇದನ್ನು ಬೆಳೆಯಲಾಗುತ್ತದೆ. ಅಂತೆಯೇ ಮನೆಯಲ್ಲಿ ಚಟ್ಟಿಯಲ್ಲಿ ಇದನ್ನು ಬೆಳೆಸಿಕೊಳ್ಳಬಹುದಾಗಿದೆ. ದೇಹದ ಹೊರಗೆ ಮತ್ತು ಒಳಗೆ ಕೂಡ ಔಷಧೀಯ ರೂಪದಲ್ಲಿ ಈ ಸಸ್ಯ ಸಹಾಯ ಮಾಡುತ್ತದೆ. ಬೇವನ್ನು ಜಜ್ಜಿ ಸೇವಿಸಿದಲ್ಲಿ ಹೊಟ್ಟೆಯ ಹಲವಾರು ಬೇನೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಹಿರಿಯರಿಗೆ ಮತ್ತು ಕಿರಿಯರಿಗೆ ಇದು ಅತ್ಯಂತ ಉತ್ತಮವಾಗಿದೆ.
ಕುಂದಾಪ್ರ ಡಾಟ್ ಕಾಂ ಲೇಖನ