ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಖಾಸಗಿ ನೆಟ್‌ವರ್ಕ್ ಆಪರೇಟರ್ಗಳ ಸಭೆ ನಡೆಸಿದರು.
ಗ್ರಾಮೀಣ ಭಾಗಗಳನ್ನು ಹೆಚ್ಚು ಒಳಗೊಂಡಿರುವ ಕ್ಷೇತ್ರ ಬೈಂದೂರು. ಇಲ್ಲಿನ ಬಹಳಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದು, ಜನರು ಸಂವಹನ ಸಮಸ್ಯೆಯನ್ನು ಎದುರಿಸುತಿದ್ದಾರೆ. ಪ್ರಸ್ತುತ ಲಾಕ್ಡೌನ್ ಕಾರಣದಿಂದ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಣ ಆನ್ಲೈನ್ ಮೂಲಕ ನಡೆಯುತ್ತಿದೆ. ಮೊಬೈಲ್ ಅವಲಂಬಿತ ಪ್ರಸಕ್ತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಅತಿ ಅಗತ್ಯವಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಲ್ಲಿ ನಿಂತುಕೊಳ್ಳುವುದು, ಕಿಲೋಮಿಟರಗಳುಗಟ್ಟಲೆ ಹೋಗಬೇಕಾದ್ದು, ಕಾಡು ಪ್ರಾಣಿಗಳ ಕಾಟ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಗ್ರ ಬೈಂದೂರಿನ ನೆಟ್ವರ್ಕ್ ಸಮಸ್ಯೆಗೆ ಮುಕ್ತಿ ಕೊಡುವಂತೆ ನೆಟ್‌ವರ್ಕ್ ಆಪರೇಟರ್ಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.
ಟವರ್ ಹಾಕಿಸಲು ಕನ್ವರ್ಷನ್ ಭೂಮಿ ಬೇಕು ಎಂಬ ಕಾರಣಕ್ಕೆ ಹೊಸದಾಗಿ ಟವರ್ ಮಾಡುವಲ್ಲಿ ಕನ್ವರ್ಷನ್ ಜಾಗಗಳ ಸಮಸ್ಯೆ ಎದುರಾಗುತಿತ್ತು. ಹಾಗಾಗಿ ಅದರಿಂದ ವಿನಾಯತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ (ಸಿಎಸ್) ಮಾತನಾಡಿದ್ದೇನೆ. ಗ್ರಾಮ ಪಂಚಾಯತ್ ಎನ್.ಓ.ಸಿ ಸಮಸ್ಯೆ ಎದುರಿಸುತಿದ್ದ ಗಂಗೊಳ್ಳಿ, ಕಟ್‌ಬೆಲ್ತೂರು ಪಂಚಾಯತ್ ಪಿಡಿಓಗಳಿಗೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸಿ ಶೀಘ್ರ ಅನುಮತಿ ನೀಡುವಂತೆ ಸೂಚಿಸಲಾಗಿದೆ ಎಂದರು.