ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಛಾಯಾಗ್ರಾಹಕ ಹಾಗೂ ಅವರ ಪುತ್ರ ಗಂಭೀರ ಗಾಯಗೊಂಡು, ಹಿಂಬದಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ಜಿಲ್ಲಾ ಶಿರಾ ತಾಲೂಕಿನ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಅಪಘಾತದಲ್ಲಿ ಗಂಭೀರಗೊಂಡವರನ್ನು ಕುಂದಾಪುರದ ಹಿರಿಯ ಛಾಯಾಗ್ರಾಹಕ ಹೇರೂರು ಅಶೋಕ ಕುಮಾರ್ ಶೆಟ್ಟಿ (58) ಹಾಗೂ ಅವರ ಪುತ್ರ ಪನ್ನಗ (24) ಎಂದು ಗುರುತಿಸಲಾಗಿದೆ.
ನಾವುಂದ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಅವರು ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ ಜೊತೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ತಮ್ಮ ಕಿಯಾ ಸೊನೆಟ್ ಕಾರಿನಲ್ಲಿ ಭಾನುವಾರ ರಾತ್ರಿ ವಾಪಾಸ್ಸಾಗುತ್ತಿದ್ದರು. ಅಶೋಕ್ ಕುಮಾರ್ ಶೆಟ್ಟಿ ಪುತ್ರ ಪನ್ನಗ ಕಾರು ಚಲಾಯಿಸುತ್ತಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ದಾವಣಗೆರೆಯಲ್ಲಿ ಎದುರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಗೆ ಕಾರು ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.